ಗುರುವಾರ, ಮಾರ್ಚ್ 11, 2010

....ಸ್ವರ್ಗಾದಪಿ ಗರಿಯಸಿ

ವಾಪಸು ಬೆಂಗಳೂರಿಗೆ ಹೊರಡೊ ತಯಾರಿ ಶುರು ಆದಾಗ ಯಥಾಪ್ರಕಾರ ನನ್ನ ಮನಸ್ಸು ಚೂಡಾ (ನನ್ನ ಮನಸ್ಸು ಮಂಡಿಗೆ ತಿನ್ನೊದಿಲ್ಲ) ತಿನ್ನೊಕೆ ಶುರು ಮಾಡತು. ಫ಼್ಲೈಟ್ ಬೆಂಗಳೂರು ಮುಟ್ಟಿದ ತಕ್ಷಣದಿಂದ ಮುಂದಿನ ನಾಲ್ಕು ತಿಂಗಳು ಏನೇನು ಮಾಡಬೇಕು ಅನ್ನೊದು ಇಷ್ಟುದ್ದ ಪಟ್ಟಿ ಮಾಡಿ ಕಣ್ಣು ಮುಂದೆ ಇಟ್ಕೊಂಡೆ. ಅದರೊಳಗೆ ಬ್ಲಾಗ್ ಬರಿಯೊದೂ ಒಂದು ಇತ್ತು. ಯಾವ ಯಾವ ವಿಷಯದ ಬಗ್ಗೆ ಬರಿಯಬೇಕು ಅನ್ನೊದುನ್ನೂ ಲೆಖ್ಖಾ ಹಾಕಿ ಅಯಿತು.

ಬೆಂಗಳೂರಿಗೆ ಬಂದು ಸುಮಾರು ಎರಡು ವಾರ ಆದ್ರೂನು, ಕಣ್ಣ ಮುಂದೆ ಇರೊ ಪಟ್ಟಿಯೊಳಗಿನ ಒಂದು ಕೆಲಸಾನೂ ಮಾಡ್ಲಿಕ್ಕಿನೂ ಆಗಿಲ್ಲ, ಇಛ್ಛಾನೂ ಪೂರ್ತಿ ಆಗಿಲ್ಲಾ. ಆಫೀಸಿನ ಕೆಲಸದ ಗಡಿಬಿಡಿಯೊಳಗ ಮತ್ತು ಸಿನಿಮಾ ಕಥೆ ಚರ್ಚೆಯೊಳಗ .......ಮತ್ತೆ ಅದೇ ಚಕ್ರದ ಗಿರಕಿಯೊಳಗ ೧೫ ದಿನಾ ಕಳದ್ವು.

ಮೈನಸ್‍ ೨೬ ಡಿಗ್ರಿಯಿಂದ, ಹದಿನೆಂಟು ಘಂಟೆಯೊಳಗೆ ೩೦ ಡಿಗ್ರಿ ಬಿಸಿಲಿನ ಬಂದಾಗ ಆಗುವ ಅನುಭವಕ್ಕೆ ಅಕ್ಷರ ರೂಪ ಕೊಡಬೇಕು, ಬೆಂಗಳೂರಿನಲ್ಲಿ ಮೂರು ತಿಂಗಳೊಳಗ ಆಗಿರೊ ಸಣ್ಣ-ದೊಡ್ದ ಬದಲಾವಣೆಗಳನ್ನು ಗಮನಿಸಿ ಅವುಗಳ ಬಗ್ಗೆ ಬರಿಬೇಕು, ಈ ಸಣ್ಣ ಮಧ್ಯಂತರದ ನಂತರ ನನ್ನ ನೋಡಿದವರ ಮಾತುಗಳನ್ನ ಇಲ್ಲಿಗೆ ತರಬೇಕು, ಅಂತೆಲ್ಲಾ ಅಂದುಕೊಂಡಿದ್ದೆ. ಆದ್ರ ಅವ್ಯಾವು ಇಲ್ಲಿಯವರಿಗೆ ಆಗಿಲ್ಲ.

ಬೆಂಗಳೂರಿಗೆ ಬಂದ ಮೇಲೆ, ಮಕ್ಕಳ ಜೊತೆ ಭರ್ಪೂರಾಗಿ ಆಟ ಆಡಿದೆ. ಮೈಸೂರು ರೋಡ್‍ಲ್ಲಿರೊ ಹೊಸಾ ಬಿಗ್ ಸಿನೆಮಾದಲ್ಲಿ, "ರೋಡ್ ಮೂವಿ" ಸಿನೆಮಾ ನೋಡಿದೆ, ನೆಟ್‍ಕಲ್ಲಪ್ಪಾ ಸರ್ಕಲ್‍ಲ್ಲಿರೊ ಚಿಕ್ಕ ಅಂಗಡಿನಲ್ಲಿ ಗಿರ್ಮಿಟ್ ಮತ್ತೆ ಮಿರ್ಚಿ ಭಜಿ ಗೆಳೆಯಾ ರಾಜೀವನ ಜೊತೆ ತಿಂದೆ, ಎಲ್‍ಐಸಿ ದುಡ್ಡು ಕಟ್ಟೋ ನೆವದಾಗ ೫-೬ ವರ್ಷದ ನಂತರ ಯಶವಂತರಪುರ ಕಣ್ಣರಳಿಸಿ ತಿರಗಾಡಿದೆ, ಕಾಲು ನೋವು ಅಂತ ಮಲಗಿದ್ದ ರಾಜೀವನ್ನ ಅಪೊಲೋಗೆ ಕರ್ಕೋಂಡು ಹೋಗಿದ್ದೆ, "ಚಾಟ್ಸ್ ಶೋ" ಅನ್ನೋ ನೆವಾದಾಗ ಪೂಜಾ ಗಾಂಧಿ, ರಘು ಮುಖರ್ಜಿ ಜೊತೆ ಪಾನಿ ಪೂರಿ ತಿಂದು ಸಿನಿಮಾದ ಬಗ್ಗೆ ಹರಟೆ ಹೊಡ್ದೆ, ಎಷ್ಟೊ ವರ್ಷದ ನಂತರ ಭೇಟಿ ಆದ ಸಂಗಮೇಶ ಜೊತೆ ಪುಸ್ತಕ ಮೇಳಕ್ಕೆ ಹೋಗಿದ್ದೆ, ಇವ್ಯಾವು ನಾ ಮಾಡಬೇಕು ಅಂತ ಅನ್ಕೊಂಡಿರಲ್ಲಿಲ್ಲ ಆದರೂ ಈ ಸಣ್ಣ ಸಣ್ಣ ಖುಷಿಯನ್ನ ಬೊಗಸೆಯೊಳಗೆ ಹಿಡ್ಕೊಂಡೆ.

ಏನೇ ಆದ್ರೂ ನಮ್ಮೂರನೊಳಗ, ನಮ್ಮವರ ಜೋಡಿ ಇರೋದೆ ಒಂದು ಸಂತೋಷ. ಅದಕ್ಕೆ ಅಲ್ವಾ ಹಿರಿಯರು ಹೇಳಿದ್ದು, ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ....ಅಂತ.

ಶುಕ್ರವಾರ, ಫೆಬ್ರವರಿ 12, 2010

ಎಂಥಾ ಛಳಿಯಯ್ಯಾ ಇದು ಎಂಥಾ ಛಳಿ !

ಕೆನಡಾದಲ್ಲ್ಲಿರೊ ಈ ಛಳಿನ ವರ್ಣನಾ ಮಾಡೋದು ಹೇಗೆ? ಅದು ಬಿಜಾಪುರದ ಬಿಸಿಲುಸೀಮೆಯಿಂದಾ ಬಂದಿರೋ ನನ್ನಂತಹವನಿಗೆ ಆಗದಂತಾ ಮಾತು.

೪೮ ಡಿಗ್ರಿ ಬಿಸಿಲನಲ್ಲಿ ಹೊಗೆಯಾಡೊ ಚಹಾ ಸುರ್ ಅಂತ ಕುಡ್ಕೊತ ಅದರ ಜೊತೆ ಬೀಡಿನೋ ಸಿಗರೇಟೊ ಎಳದು ಅವತ್ತಿನ ಪೇಪರಲ್ಲಿ ಬಂದಿರೋ ’ಒಣಾ" ರಾಜಕೀಯದ ಬಗ್ಗೆ ಮಾತಡತಾ ಕೂತಿರೊರನ್ನಾ ನೋಡಿ ಗೊತ್ತಿರೋ ನನಗೆ, ಊರಲ್ಲಿದ್ದಾಗಾ ಇನ್ನೂ ಸೂರ್ಯ ಹುಟ್ಟೋಕೆ ಮೊದ್ಲೆ ಬಿಸಿಲಿನ ಝಳಕ್ಕೇ ಮುಖ ಕೊಡೊ ನನಗೆ, ಮೈನಸ್ ೧೮ ರಿಂದ ೨೫ ರ ಡಿಗ್ರಿ ಛಳಿಯಲ್ಲಿನ ವಾಸ, ಕಾಲಾಪಾನಿ ಇದ್ದಂಗ.

ಇಲ್ಲಿದ್ದಾಗ, ತೆಗೆದಿರೋ ಫೊಟೊ ತೋರಿಸಿ ಎಂಥಾ ಥಂಡಿ ಇತ್ತು ಅಂತ ಬೇರೆಯವರಿಗೆ ಹೇಳೋದು ಒಂದೇ .....ಹೂವಿನ ಫೊಟೊ ತೊರಿಸಿ ಅದರ ಪರಿಮಳದ ಬಗ್ಗೆ ವರ್ಣಾನಾ ಮಾಡುದು ಒಂದೇ.

ಅದಕ್ಕೇ ಫೊಟೊ ಮಾತ್ರ ಇಲ್ಲಿ ಇಟ್ಟಿದ್ದೇನೆ, ಛಳಿ ವರ್ಣಾನಾ ಮಾಡೊದುನ್ನ ಕವಿತೆ ಬರಿಯೊರ್ಗೆ ಬಿಟ್ಟೀನಿ.

ಅಂದಹಂಗ ಇದು ಬ್ಲಾಗಿಗೆ ಹಾಕಿದ್ದು ಟಿವಿ ನಲ್ಲಿ ತೋರಸತಾ ಇರೋ "ವಿಂಟರ ಓಲಂಪಿಕ"ನ ಅದ್ಭುತವಾದ ಪ್ರಾರಂಭೋತ್ಸವ ನೋಡ್ಕೊತ್.

ಶುಕ್ರವಾರ, ಜನವರಿ 29, 2010

ಪತ್ತೇದಾರ ಅರಿಂಜಯ ಬೇಕಾಗಿದ್ದಾನೆ

ಇವತ್ತ ಇದು ಯಾಕ ನೆನಪು ಅಯಿತು ಅಂದ್ರ, ಖ್ಯಾತ ಕನ್ನಡ ದಿನಪತ್ರಿಕೆಯವರು ಇವತ್ತಿನ ಪುರವಣಿಯಲ್ಲಿ ಶಿವರಾಜಕುಮಾರ ಬಗ್ಗೆ ಬರದಾಗ ’ಗಾಜು100 ಗಂಡು (ಗಾಜುನೂರು ಅಂತ ನಾವು ಓದ್ಕೊಬೇಕು)’ ಅಂತ ತಲೆಬರಹ ಕೊಟ್ಟು, ತಮಗ ತಲಿನೂ ಇಲ್ಲಾ ನಾಚಿಕಿನೂ ಇಲ್ಲಾ ಅಂತ ತೋರಸ್ಕೋಂಡಾರ್. ಅದು ನೂರು ಅಲ್ಲಾ 'ಹಂಡ್ರೆಡ್' ಅಂತ ಅವರಿಗಿ ಅವರ ಮಾಸ್ತರೇ ಖುದ್ದಾಗಿ ಬಂದು ಹೇಳಬೇಕು. ಪತ್ರಿಕೆಯವರೇ ಹೀಂಗ ತಮ್ಮ ಕ್ರಿಯಾಶೀಲತೆಯ ಬರಡುತನ ತೊರಿಸಿಕೊಳ್ಳಬೇಕ್ಂದ್ರ ನಮ್ಮ್ಂತಾ ಓದುಗು ಮಂದಿ ಇನ್ನೇನ್ ಮಾಡಬೇಕು ಹೇಳ್ರಿ.

ಮ್ಯಾಲ್ ಹೇಳಿದ್ದು ಬರೇ ಪೀಠಿಕಾ.

ನಾವು ಕನ್ನಡಿಗರು, ನಮಗೇ ಗೊತ್ತಿರಲಾರದಂಗ ಕನ್ನಡದ್ದು ಅಂಕಿ-ಸಂಖ್ಯಾ ಮರೀಲಿಕತ್ತಿವೀ ಅಂತ ದಿನಾ ಕನ್ನಡ ಪೇಪರ್ ಓದವರಿಗೂ ತಿಳಿದಿರಲ್ಲಿಕಿಲ್ಲ. ಅಲ್ಲಾ ನೀವು ಮಜಾ ನೋಡ್ರಿ, ನಿಮ್ಮ ಗೆಳೆಯಂದ್ರಿಗೊ ಇಲ್ಲಾ ಪರಿಚಯದವರಿಗೊ ಅವರ್ ಫೋನ್ ನಂಬರ (ಅಂಕಿ ಅಲ್ಲಾ, ಮತ್ತ) ಕೇಳ್ರಿ, ಅವರು ಸುರು ಮಾಡುದೇ..ನೈನ್ ಫ಼ೈವ್ ಸಿಕ್ಸ್ ಇಲ್ಲಾ ಸೆವೆನ್ ಡಬಲ್ ತ್ರೀ ಟೂ ಅನ್ಕೊತ್ ಎಲ್ಲಾ ಇಂಗ್ಲೀಷನ ಅಂಕಿಯೊಳಗೆ ಹೇಳತಾರ್. ಇದು ಬರೇ ಮೊಬೈಲ ನಂಬರದು ಮಾತ್ರ ಅಲ್ಲಾ ಎಲ್ಲಾ ಕಡೆನೂ ಇದೆ ಕಥಿ. ಬೇಕಾದ್ರ್ ಇನ್ನೊಂದು ’ಪ್ರಯೋಗ’ ಮಾಡ್ರಿ, ಯಾರಗಾದ್ರು ತಾರೀಖ ಕೇಳ್ರಿ ಪ್ರತಿಶತ ೮೦ ಮಂದಿ ಇಂಗ್ಲೀಷನ ಅಂಕಿನೇ ಹೇಳ್ತಾರ. ಬೆಂಗಳೂರನಾಗ ಬಜ಼ಾರಕ್ ಹೋದ್ರ್ ಕಾಯಿಪಲ್ಯ್ ಮಾರಕ್ಕಿನ್ನೂ, ಎಲ್ಲಾ ಲೆಕ್ಕಾ ಹಾಕಿ ’ಸೆವೆನ್ ರೂಪಿಸ್’ ಅಂತಾಳ. ಅಂಗಡಿಯಾಂವ ನಿಮಗ ’ಟ್ವೆಂಟಿ ಫ಼ೈವ್’ ಪೈಸಾ ಕೇಳ್ತಾನೆ ಹೊರತು ನಾಲ್ಕಾಣೆನೊ ಇಲ್ಲಾ ಇಪ್ಪತ್ತೈದು ಪೈಸಾನೊ ದೇವರಾಣೆ ಕೇಳೊದಿಲ್ಲ.


ನಿಧಾನಕ್ಕ ನಮ್ಮ್ ಬಸ್‍ನಾಗಿಂದ, ಅಂಗಡಿಯೊಳಗಿಂದ, ಇಲ್ಲಾ ಪುಸ್ತಕದೊಳಗಿಂದ ಕನ್ನಡದ್ದು ಅಂಕಿಗಳು ಮಾಯಾ ಆಗ್ಲಿಕತ್ತಾವ. ಎಲ್ಲಾದಗಿಂತಾ ಹೆಚ್ಚಾಗಿ ನಮ್ಮ ಕನ್ನಡ ದಿನಪತ್ರಿಕೆಯವರು, ವಾರಪತ್ರಿಕೆಯವರು ಸಹಿತ್ ಕನ್ನಡದ ಅಂಕಿ ಬಳಸುದು ಬಿಟ್ಟಾರ್. ಎಲ್ಲಾ ಪುಟಕ್ಕುನ್ನು ಇಂಗ್ಲಿಷ್ ಅಂಕಿನೇ ಪ್ರಿಂಟ್ ಮಾಡ್ತಾರ್. ಇದು ಒಂದೇ ಪೇಪರದ್ದು ಅಲ್ಲಾ, ಎಲ್ಲಾ ಪೇಪರದ್ದು ಇದೇ ಕಥಿ. ಯಾಕ್ ಕನ್ನಡದ್ದು ಅಂಕಿ ಕಳದ ಹೊಗ್ಯಾವ್ ಇಲ್ಲಾ ತುಟ್ಟಿ ಆಗ್ಯವಾ ಇಲ್ಲಾ ಅವನ್ನ್ ಬಳಸಲ್ಲಿಕ್ಕಿ ನಮಗ್ ಎಲ್ಲಾರಿಗೂನು ನಾಚಿಕಿನಾ?


ನಾವು ನಮ್ಮ ಮಕ್ಕಳಿಗಿ ಇವತ್ತ ಮಗ್ಗಿ ಹೇಳಿಕೊಡುದು ಬಿಟ್ಟು, ’ಟೇಬಲ್ಸ್’ ಹೇಳಿಕೊಡತಿವಿ. ಅವ್ರಿಗಿ ಇಂಗ್ಲಿಷನಾಗ ಲೆಕ್ಕ ಹಾಕುದು ಕೈ ಹಿಡಿದು ಹೇಳಿಕೊಡತಿವಿ. ನಮ್ಮ ಪಿನ್ ಕೊಡ್‍ದಿಂದ್ ಹಿಡಿದು ಗಾಡಿ ನಂಬರತನಾ ಎಲ್ಲಾ ಇಂಗ್ಲೀಷನಾಗೇ ಅವ. ಹೀಂಗಾದ್ರ್ ನಾಳೆ ನಮಗ ನಮ್ಮ ಅಂಕಿ-ಸಂಖ್ಯಾಗಳು, ನಮ್ಮ ಎದುರಿಗೇನೇ ಬಂದ್ರುನು, ನಾವು ಗುರುತು ಹಿಡಿತಿವೋ ಇಲ್ಲೋ?


ಕಳಕೊಂಡಿರೊ ಇಲ್ಲಾ ಬೆಂಗಳೂರಿನಂತಾ ಊರಾಗ ಕಳದು ಹೋಗಿರೋ, ನಮ್ಮ್ ಕನ್ನಡದ ಅಂಕಿ-ಸಂಖ್ಯಾ ಹುಡಿಕಿಕೊಡ್ಲಿಕ್ಕಿ ನಮ್ಗ್ ಈಗ ಅರ್ಜೆಂಟಾಗಿ ಒಬ್ಬ ಪತ್ತೇದಾರ ಅರಿಂಜಯ ಬೇಕಾಗ್ಯಾನ್. ನಿಮಗ್ ಏನ್‍ರೆ ಅರಿಂಜಯ ಸಿಕ್ಕರೆ ದಯವಿಟ್ಟು ಈ ಕೇಸಿನ ಬಗ್ಗೆ ಮಾತಾಡತಿರಾ?