ಕೆಲಸದ ಮೇಲೆ ಬೆಂಗಳೂರಿಂದ ಕೆನಡಾಗೆ ಬಂದ್ದಿದ್ದ ನಾನು..... ಹೋಟೆಲ್‍ನಲ್ಲಿ, ರಾತ್ರಿ ಕಂಪ್ಯೂಟರ್ ಮುಂದೆ ಕೂತು ಕೀ ಬೋರ್ಡ್ ಕುಟ್ಟುತ್ತಿದ್ದೆ.
ಪಲ್ಲವಿ ಫೊನ್ ಬಂತು. ಮಾಮೂಲಿನಂತೆ ಮಾತಾಡುತ್ತಿದ್ದವನಿಗೆ, ಹಠಾತ್ತಾನೆ ಯಾರೊ ಕೆನ್ನೆಗೆ ಹೊಡದಂತಾಯಿತು. ಪಲ್ಲವಿ ಆ ಕಡೆಯಿಂದ ವಿಷ್ಣು ತೀರಿ ಹೋದ ಸುದ್ದಿ ಹೇಳುತ್ತಾ ಇದ್ದಳು. ಸ್ವಲ್ಪ ಸಮಯದವರಿಗೂ ಏನೂ ಗೊತ್ತಾಗಲೇ ಇಲ್ಲ.
***********************
ಈಗ ಕಳೆದ ಎರಡು ದಿವಸದಿಂದ ಏನೋ ತಳಮಳ. ಯು ಟ್ಯುಬು, ಆನ್ ಲೈನ್ ಪೇಪರು, ಅದು ಇದು ಅಂತ ಓದಿ, ನೋಡಿ ಯಾಕೊ ದುಃಖ. ಒಬ್ಬ ನಟ ತನ್ನ ಸಿನೆಮಾಗಳ ಮೂಲಕ ಜನರಿಗೆ ಇಷ್ಟು ಹತ್ತಿರ ಆಗುವದು, ಲಾಜಿಕ್‍ಗೆ ಸಿಕ್ಕುವಂತದಲ್ಲ.
ಚಿಕ್ಕಂದಿನಿಂದಲೂ ನಾನು ವಿಷ್ಣು ಅಭಿಮಾನಿ. ಕೈಗೆ ಕಡಗ ಏರಿಸಿ, ಎಡಗೈ ಮುಂದೆ ಮಾಡಿ "ನಾನೇ ಬೇರೆ ನನ್ನ ಸ್ಟೈಲೇ ಬೇರೆ" ಅಂತಾ ಪೋಸ್ ಕೊಡತಾ ಇದ್ದೆ. ವಿಷ್ಣು-ಪ್ರಭಾಕರ ಫೈಟ್ ಅಂದ್ರೆ ಬಾಯಿ ಬಿಟ್ಟು ನೋಡತಾ ಇದ್ದೆ. ಗೆಳೆಯರ ಮಧ್ಯೇ ವಿಷ್ಣು ಸಿನೆಮಾದ ಬಗ್ಗೆ ಮಾತಾಡತಾ ಇದ್ದೆ, ಅವರಿಗೆ ನನ್ನ ರೇಗಿಸಲು ವಿಷ್ಣು ಒಂದು ನೆಪ. ಸ್ವಲ್ಪ ವಿಷ್ಣುಗೆ ಯಾರದ್ರೂ ಎನಾದ್ರೂ ಅಂದ್ರು ಅವರ ಮೇಲೆ ಬೀಳತಾ ಇದ್ದೆ. ಒಟ್ಟಿನಲ್ಲಿ ನನ್ನ ಬಾಲ್ಯದ ನೆನಪುಗಳಲ್ಲಿ, ವಿಷ್ಣು ಸದಾ ಹಸಿರು.ವಿಷ್ಣು ತೀರಿ ಹೋದ ಮಾರನೇ ದಿನ ದೂರದ ಧಾರವಾಡದಿಂದ ಗೆಳೆಯನೊಬ್ಬ (ಅವನು ನನ್ನ ಜೊತೆ ಮಾತಾಡಿ, ಎಷ್ಟೊ ವರ್ಷಗಳಾಗಿತ್ತು.) ಫೋನ್ ಮಾಡಿ "ವಿಷ್ಣು ಹೋಗಿರೊದನ್ನ ಟಿವಿನಲ್ಲಿ ತೋರಸ್ತಾ ಇದ್ದರು, ನೋಡ್ತಾ ಇದ್ದೆ, ನಿನ್ನ ನೆನಪಾಯಿತು. ನಿನ್ನ ಹೀರೊ ಹೋಗಿಬಿಟ್ಟನಲ್ಲಪಾ?" ಅಂದ.ನನಗೆ ಗೊತ್ತಿದಲ್ಲದೇ ಬೇರೆಯವರ ದೄಷ್ಟಿಯಲ್ಲಿ, ವಿಷ್ಣು ನನ್ನ ವ್ಯಕ್ತಿತ್ವದ ಒಂದು ಅಂಗವೇ ಆಗಿದ್ದು ನನ್ನ ಗಮನಕ್ಕೆ ಬಂತು.ಆಮೇಲೆ ಬಂದ ನನ್ನ ಗೆಳೆಯಂದಿರ ಫೊನ್ ಕಾಲ್‍ಗಳು ಆ ಅನಿಸಿಕೆಗೆ ತಮ್ಮ ಒಪ್ಪಿಗೆ ಕೊಟ್ಟವು.
ವಿಷ್ಣುಗೆ, ಕ್ಲಿನ್ಟ್ ಈಸ್ಟವುಡ್ ತರದ್ದು ಸ್ಕ್ರಿಪ್ಟ್ ಬರೀಬೇಕು ಅಂತ ಹರ್ಷ ಜೊತೆ ಮಾತಾಡಿದ್ದು ಜ್ಞಾಪಕಕ್ಕೆ ಬಂತು. ನನ್ನ ಮೆಚ್ಚಿನ ಹೀರೊನ ನೋಡೊಕೆ ಆಗಲ್ಲಿಲ್ಲ ಅನ್ನೊದು ನೋವೂ ತಂದಿತು.
ದೇವರು ಇಷ್ಟು ಬೇಗ ಆಟ ಮುಗಿಸಬಾರದಿತ್ತು. ವಿಷ್ಣು ಇನ್ನೂ ಒಂದಿಷ್ಟು ವರ್ಷ ಘರ್ಜಿಸಬೇಕಿತ್ತು.