ಸ್ವಗತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸ್ವಗತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಡಿಸೆಂಬರ್ 23, 2012

ದೀಪಾವಳಿ ಹಬ್ಬಾ ಮಾಡೊಣು


ದೀಪಾವಳಿ ಹಬ್ಬಾ ಮಾಡೊಣು

-ಗುರುರಾಜ ಕುಲಕರ್ಣಿ (ನಾಡಗೌಡ)



ಅಮಾವಸಿ ಕತ್ತಲಿಯೊಳಗ ಸಾಲ-ಸಾಲಾಗಿ ದೀಪ ಹಚ್ಚಿ
ಬೆಳಕು ತರೊಣು
ದೀಪಾವಳಿ ಹಬ್ಬಾ ಮಾಡೊಣು ||

ಮನಿಯೊಳಗಿನ ಧೂಳ-ಕಸ ಹೊರಗ ಚೆಲ್ಲೊಣು
ಬಾಳಿಗಿಡ, ತೆಂಗಿನ ಗರಿ,ಹೂವಿನ ಮಾಲಿ, ಬಾಗಿಲಿಗಿ ಕಟ್ಟೊಣು
ದೀಪಾವಳಿ ಹಬ್ಬಾ ಮಾಡೊಣು ||

ಅಕ್ಕನ ತದಿಗಿ, ಭಾವನ ಬಿದಿಗಿ, ನೀರು ತುಂಬು ಹಬ್ಬಾ ಮಾಡೊಣು,
ಮನಿಯವರಿಗೆಲ್ಲಾ ಆರತಿ, ದೇವರಿಗಿ ಮಂಗಾಳರತಿ ಮಾಡೊಣು,
ದೀಪಾವಳಿ ಹಬ್ಬಾ ಮಾಡೊಣು ||

ಅಮ್ಮ ಮಾಡಿಟ್ಟಿದ್ದ ಚಕ್ಕಲಿ ಉಂಡಿ ಫರಾಳ ತಿನ್ನೊಣು,
ಭೂಚಕ್ರ, ಸುರುಸುರು ಬತ್ತಿ, ಪಟಾಕಿ ಹೊಡಿಯೊಣು,
ದೀಪಾವಳಿ ಹಬ್ಬಾ ಮಾಡೊಣು||

ದೊಡ್ಡವರು, ಸಣ್ಣವರು, ಎಲ್ಲಾರು ಅಂಗಡಿಗಿ ಹೊಗೊಣು,
ಹೊಸಾ ಹೊಸಾ ಬಟ್ಟೆ ತಂದು-ಹಾಕೊಂಡು, ಗತ್ತು ತೊರಿಸೊಣು
ದೀಪಾವಳಿ ಹಬ್ಬಾ ಮಾಡೊಣು||

ಸಿಟ್ಟ ಸೆಡವ ಮಾಡ್ಕೊಂಡು ದೂರ ಇದ್ದವರಿಗೆ ಹತ್ತರ ಕರಿಯೋಣು
ಅಕ್ಕ ಪಕ್ಕದವರು, ಮನಿವರೆಲ್ಲಾ ಕಡಬು ತಿಂದು ಸಂತೋಷ ಪಡೋಣು
ದೀಪಾವಳಿ ಹಬ್ಬಾ ಮಾಡೊಣು||

ಚಿಂತೆ-ದುಃಖ ಮರೆತು,ಲಕ್ಷ್ಮೀ ಪೂಜಾ ಮಾಡೊಣು,
ನಾಳೆ ನಮ್ಮದೇ ಅಂತಾ ಸೆಡ್ಡು ಹೊಡ್ಕೊಂಡು
ದೀಪಾವಳಿ ಹಬ್ಬಾ ಮಾಡೊಣು||    
******
-೨೦೧೨ ವರ್ಷದ ದೀಪಾವಳಿಗಿ ಬ್ರಸಲ್ಸ್ ನಿಂದ ಸಿಂದಗಿಗೆ ಹೊಗೊ ತಯಾರಿ ನಡೆಸಿದಾಗ ಅನ್ಸಿದ್ದನ್ನ ಕವನದ ರೂಪದಾಗ ಬರೆದ್ದಿದ್ದು. ಸಿಂದಗಿಯೊಳಗೆ ದೀಪಾವಳಿ ಮಾಡೊದು ಅಂದ್ರ...ಸಂತೋಷನೊ ಸಂತೋಷ...ಕಳೆದ ಇಪ್ಪತ್ತು - ಇಪ್ಪೈತ್ತೈದು ವರ್ಷದೊಳಗ ಒಂದೊ-ಎರಡೊ ಸರ್ತಿ ತಪ್ಪಸಕೊಂಡಿನಿ ಅಷ್ಟೆ.

ಗುರುವಾರ, ಮಾರ್ಚ್ 11, 2010

....ಸ್ವರ್ಗಾದಪಿ ಗರಿಯಸಿ

ವಾಪಸು ಬೆಂಗಳೂರಿಗೆ ಹೊರಡೊ ತಯಾರಿ ಶುರು ಆದಾಗ ಯಥಾಪ್ರಕಾರ ನನ್ನ ಮನಸ್ಸು ಚೂಡಾ (ನನ್ನ ಮನಸ್ಸು ಮಂಡಿಗೆ ತಿನ್ನೊದಿಲ್ಲ) ತಿನ್ನೊಕೆ ಶುರು ಮಾಡತು. ಫ಼್ಲೈಟ್ ಬೆಂಗಳೂರು ಮುಟ್ಟಿದ ತಕ್ಷಣದಿಂದ ಮುಂದಿನ ನಾಲ್ಕು ತಿಂಗಳು ಏನೇನು ಮಾಡಬೇಕು ಅನ್ನೊದು ಇಷ್ಟುದ್ದ ಪಟ್ಟಿ ಮಾಡಿ ಕಣ್ಣು ಮುಂದೆ ಇಟ್ಕೊಂಡೆ. ಅದರೊಳಗೆ ಬ್ಲಾಗ್ ಬರಿಯೊದೂ ಒಂದು ಇತ್ತು. ಯಾವ ಯಾವ ವಿಷಯದ ಬಗ್ಗೆ ಬರಿಯಬೇಕು ಅನ್ನೊದುನ್ನೂ ಲೆಖ್ಖಾ ಹಾಕಿ ಅಯಿತು.

ಬೆಂಗಳೂರಿಗೆ ಬಂದು ಸುಮಾರು ಎರಡು ವಾರ ಆದ್ರೂನು, ಕಣ್ಣ ಮುಂದೆ ಇರೊ ಪಟ್ಟಿಯೊಳಗಿನ ಒಂದು ಕೆಲಸಾನೂ ಮಾಡ್ಲಿಕ್ಕಿನೂ ಆಗಿಲ್ಲ, ಇಛ್ಛಾನೂ ಪೂರ್ತಿ ಆಗಿಲ್ಲಾ. ಆಫೀಸಿನ ಕೆಲಸದ ಗಡಿಬಿಡಿಯೊಳಗ ಮತ್ತು ಸಿನಿಮಾ ಕಥೆ ಚರ್ಚೆಯೊಳಗ .......ಮತ್ತೆ ಅದೇ ಚಕ್ರದ ಗಿರಕಿಯೊಳಗ ೧೫ ದಿನಾ ಕಳದ್ವು.

ಮೈನಸ್‍ ೨೬ ಡಿಗ್ರಿಯಿಂದ, ಹದಿನೆಂಟು ಘಂಟೆಯೊಳಗೆ ೩೦ ಡಿಗ್ರಿ ಬಿಸಿಲಿನ ಬಂದಾಗ ಆಗುವ ಅನುಭವಕ್ಕೆ ಅಕ್ಷರ ರೂಪ ಕೊಡಬೇಕು, ಬೆಂಗಳೂರಿನಲ್ಲಿ ಮೂರು ತಿಂಗಳೊಳಗ ಆಗಿರೊ ಸಣ್ಣ-ದೊಡ್ದ ಬದಲಾವಣೆಗಳನ್ನು ಗಮನಿಸಿ ಅವುಗಳ ಬಗ್ಗೆ ಬರಿಬೇಕು, ಈ ಸಣ್ಣ ಮಧ್ಯಂತರದ ನಂತರ ನನ್ನ ನೋಡಿದವರ ಮಾತುಗಳನ್ನ ಇಲ್ಲಿಗೆ ತರಬೇಕು, ಅಂತೆಲ್ಲಾ ಅಂದುಕೊಂಡಿದ್ದೆ. ಆದ್ರ ಅವ್ಯಾವು ಇಲ್ಲಿಯವರಿಗೆ ಆಗಿಲ್ಲ.

ಬೆಂಗಳೂರಿಗೆ ಬಂದ ಮೇಲೆ, ಮಕ್ಕಳ ಜೊತೆ ಭರ್ಪೂರಾಗಿ ಆಟ ಆಡಿದೆ. ಮೈಸೂರು ರೋಡ್‍ಲ್ಲಿರೊ ಹೊಸಾ ಬಿಗ್ ಸಿನೆಮಾದಲ್ಲಿ, "ರೋಡ್ ಮೂವಿ" ಸಿನೆಮಾ ನೋಡಿದೆ, ನೆಟ್‍ಕಲ್ಲಪ್ಪಾ ಸರ್ಕಲ್‍ಲ್ಲಿರೊ ಚಿಕ್ಕ ಅಂಗಡಿನಲ್ಲಿ ಗಿರ್ಮಿಟ್ ಮತ್ತೆ ಮಿರ್ಚಿ ಭಜಿ ಗೆಳೆಯಾ ರಾಜೀವನ ಜೊತೆ ತಿಂದೆ, ಎಲ್‍ಐಸಿ ದುಡ್ಡು ಕಟ್ಟೋ ನೆವದಾಗ ೫-೬ ವರ್ಷದ ನಂತರ ಯಶವಂತರಪುರ ಕಣ್ಣರಳಿಸಿ ತಿರಗಾಡಿದೆ, ಕಾಲು ನೋವು ಅಂತ ಮಲಗಿದ್ದ ರಾಜೀವನ್ನ ಅಪೊಲೋಗೆ ಕರ್ಕೋಂಡು ಹೋಗಿದ್ದೆ, "ಚಾಟ್ಸ್ ಶೋ" ಅನ್ನೋ ನೆವಾದಾಗ ಪೂಜಾ ಗಾಂಧಿ, ರಘು ಮುಖರ್ಜಿ ಜೊತೆ ಪಾನಿ ಪೂರಿ ತಿಂದು ಸಿನಿಮಾದ ಬಗ್ಗೆ ಹರಟೆ ಹೊಡ್ದೆ, ಎಷ್ಟೊ ವರ್ಷದ ನಂತರ ಭೇಟಿ ಆದ ಸಂಗಮೇಶ ಜೊತೆ ಪುಸ್ತಕ ಮೇಳಕ್ಕೆ ಹೋಗಿದ್ದೆ, ಇವ್ಯಾವು ನಾ ಮಾಡಬೇಕು ಅಂತ ಅನ್ಕೊಂಡಿರಲ್ಲಿಲ್ಲ ಆದರೂ ಈ ಸಣ್ಣ ಸಣ್ಣ ಖುಷಿಯನ್ನ ಬೊಗಸೆಯೊಳಗೆ ಹಿಡ್ಕೊಂಡೆ.

ಏನೇ ಆದ್ರೂ ನಮ್ಮೂರನೊಳಗ, ನಮ್ಮವರ ಜೋಡಿ ಇರೋದೆ ಒಂದು ಸಂತೋಷ. ಅದಕ್ಕೆ ಅಲ್ವಾ ಹಿರಿಯರು ಹೇಳಿದ್ದು, ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ....ಅಂತ.

ಶುಕ್ರವಾರ, ಫೆಬ್ರವರಿ 12, 2010

ಎಂಥಾ ಛಳಿಯಯ್ಯಾ ಇದು ಎಂಥಾ ಛಳಿ !

ಕೆನಡಾದಲ್ಲ್ಲಿರೊ ಈ ಛಳಿನ ವರ್ಣನಾ ಮಾಡೋದು ಹೇಗೆ? ಅದು ಬಿಜಾಪುರದ ಬಿಸಿಲುಸೀಮೆಯಿಂದಾ ಬಂದಿರೋ ನನ್ನಂತಹವನಿಗೆ ಆಗದಂತಾ ಮಾತು.

೪೮ ಡಿಗ್ರಿ ಬಿಸಿಲನಲ್ಲಿ ಹೊಗೆಯಾಡೊ ಚಹಾ ಸುರ್ ಅಂತ ಕುಡ್ಕೊತ ಅದರ ಜೊತೆ ಬೀಡಿನೋ ಸಿಗರೇಟೊ ಎಳದು ಅವತ್ತಿನ ಪೇಪರಲ್ಲಿ ಬಂದಿರೋ ’ಒಣಾ" ರಾಜಕೀಯದ ಬಗ್ಗೆ ಮಾತಡತಾ ಕೂತಿರೊರನ್ನಾ ನೋಡಿ ಗೊತ್ತಿರೋ ನನಗೆ, ಊರಲ್ಲಿದ್ದಾಗಾ ಇನ್ನೂ ಸೂರ್ಯ ಹುಟ್ಟೋಕೆ ಮೊದ್ಲೆ ಬಿಸಿಲಿನ ಝಳಕ್ಕೇ ಮುಖ ಕೊಡೊ ನನಗೆ, ಮೈನಸ್ ೧೮ ರಿಂದ ೨೫ ರ ಡಿಗ್ರಿ ಛಳಿಯಲ್ಲಿನ ವಾಸ, ಕಾಲಾಪಾನಿ ಇದ್ದಂಗ.

ಇಲ್ಲಿದ್ದಾಗ, ತೆಗೆದಿರೋ ಫೊಟೊ ತೋರಿಸಿ ಎಂಥಾ ಥಂಡಿ ಇತ್ತು ಅಂತ ಬೇರೆಯವರಿಗೆ ಹೇಳೋದು ಒಂದೇ .....ಹೂವಿನ ಫೊಟೊ ತೊರಿಸಿ ಅದರ ಪರಿಮಳದ ಬಗ್ಗೆ ವರ್ಣಾನಾ ಮಾಡುದು ಒಂದೇ.

ಅದಕ್ಕೇ ಫೊಟೊ ಮಾತ್ರ ಇಲ್ಲಿ ಇಟ್ಟಿದ್ದೇನೆ, ಛಳಿ ವರ್ಣಾನಾ ಮಾಡೊದುನ್ನ ಕವಿತೆ ಬರಿಯೊರ್ಗೆ ಬಿಟ್ಟೀನಿ.

ಅಂದಹಂಗ ಇದು ಬ್ಲಾಗಿಗೆ ಹಾಕಿದ್ದು ಟಿವಿ ನಲ್ಲಿ ತೋರಸತಾ ಇರೋ "ವಿಂಟರ ಓಲಂಪಿಕ"ನ ಅದ್ಭುತವಾದ ಪ್ರಾರಂಭೋತ್ಸವ ನೋಡ್ಕೊತ್.

ಗುರುವಾರ, ಡಿಸೆಂಬರ್ 31, 2009

ಗುಹೆಗೆ ಹೋದ ಸಾಹಸ ಸಿಂಹ



















ಕೆಲಸದ ಮೇಲೆ ಬೆಂಗಳೂರಿಂದ ಕೆನಡಾಗೆ ಬಂದ್ದಿದ್ದ ನಾನು..... ಹೋಟೆಲ್‍ನಲ್ಲಿ, ರಾತ್ರಿ ಕಂಪ್ಯೂಟರ್ ಮುಂದೆ ಕೂತು ಕೀ ಬೋರ್ಡ್ ಕುಟ್ಟುತ್ತಿದ್ದೆ.

ಪಲ್ಲವಿ ಫೊನ್ ಬಂತು. ಮಾಮೂಲಿನಂತೆ ಮಾತಾಡುತ್ತಿದ್ದವನಿಗೆ, ಹಠಾತ್ತಾನೆ ಯಾರೊ ಕೆನ್ನೆಗೆ ಹೊಡದಂತಾಯಿತು. ಪಲ್ಲವಿ ಆ ಕಡೆಯಿಂದ ವಿಷ್ಣು ತೀರಿ ಹೋದ ಸುದ್ದಿ ಹೇಳುತ್ತಾ ಇದ್ದಳು. ಸ್ವಲ್ಪ ಸಮಯದವರಿಗೂ ಏನೂ ಗೊತ್ತಾಗಲೇ ಇಲ್ಲ.
***********************
ಈಗ ಕಳೆದ ಎರಡು ದಿವಸದಿಂದ ಏನೋ ತಳಮಳ. ಯು ಟ್ಯುಬು, ಆನ್ ಲೈನ್ ಪೇಪರು, ಅದು ಇದು ಅಂತ ಓದಿ, ನೋಡಿ ಯಾಕೊ ದುಃಖ. ಒಬ್ಬ ನಟ ತನ್ನ ಸಿನೆಮಾಗಳ ಮೂಲಕ ಜನರಿಗೆ ಇಷ್ಟು ಹತ್ತಿರ ಆಗುವದು, ಲಾಜಿಕ್‍ಗೆ ಸಿಕ್ಕುವಂತದಲ್ಲ.

ಚಿಕ್ಕಂದಿನಿಂದಲೂ ನಾನು ವಿಷ್ಣು ಅಭಿಮಾನಿ. ಕೈಗೆ ಕಡಗ ಏರಿಸಿ, ಎಡಗೈ ಮುಂದೆ ಮಾಡಿ "ನಾನೇ ಬೇರೆ ನನ್ನ ಸ್ಟೈಲೇ ಬೇರೆ" ಅಂತಾ ಪೋಸ್ ಕೊಡತಾ ಇದ್ದೆ. ವಿಷ್ಣು-ಪ್ರಭಾಕರ ಫೈಟ್ ಅಂದ್ರೆ ಬಾಯಿ ಬಿಟ್ಟು ನೋಡತಾ ಇದ್ದೆ. ಗೆಳೆಯರ ಮಧ್ಯೇ ವಿಷ್ಣು ಸಿನೆಮಾದ ಬಗ್ಗೆ ಮಾತಾಡತಾ ಇದ್ದೆ, ಅವರಿಗೆ ನನ್ನ ರೇಗಿಸಲು ವಿಷ್ಣು ಒಂದು ನೆಪ. ಸ್ವಲ್ಪ ವಿಷ್ಣುಗೆ ಯಾರದ್ರೂ ಎನಾದ್ರೂ ಅಂದ್ರು ಅವರ ಮೇಲೆ ಬೀಳತಾ ಇದ್ದೆ. ಒಟ್ಟಿನಲ್ಲಿ ನನ್ನ ಬಾಲ್ಯದ ನೆನಪುಗಳಲ್ಲಿ, ವಿಷ್ಣು ಸದಾ ಹಸಿರು.ವಿಷ್ಣು ತೀರಿ ಹೋದ ಮಾರನೇ ದಿನ ದೂರದ ಧಾರವಾಡದಿಂದ ಗೆಳೆಯನೊಬ್ಬ (ಅವನು ನನ್ನ ಜೊತೆ ಮಾತಾಡಿ, ಎಷ್ಟೊ ವರ್ಷಗಳಾಗಿತ್ತು.) ಫೋನ್ ಮಾಡಿ "ವಿಷ್ಣು ಹೋಗಿರೊದನ್ನ ಟಿವಿನಲ್ಲಿ ತೋರಸ್ತಾ ಇದ್ದರು, ನೋಡ್ತಾ ಇದ್ದೆ, ನಿನ್ನ ನೆನಪಾಯಿತು. ನಿನ್ನ ಹೀರೊ ಹೋಗಿಬಿಟ್ಟನಲ್ಲಪಾ?" ಅಂದ.ನನಗೆ ಗೊತ್ತಿದಲ್ಲದೇ ಬೇರೆಯವರ ದೄಷ್ಟಿಯಲ್ಲಿ, ವಿಷ್ಣು ನನ್ನ ವ್ಯಕ್ತಿತ್ವದ ಒಂದು ಅಂಗವೇ ಆಗಿದ್ದು ನನ್ನ ಗಮನಕ್ಕೆ ಬಂತು.ಆಮೇಲೆ ಬಂದ ನನ್ನ ಗೆಳೆಯಂದಿರ ಫೊನ್ ಕಾಲ್‍ಗಳು ಆ ಅನಿಸಿಕೆಗೆ ತಮ್ಮ ಒಪ್ಪಿಗೆ ಕೊಟ್ಟವು.

ವಿಷ್ಣುಗೆ, ಕ್ಲಿನ್ಟ್ ಈಸ್ಟವುಡ್ ತರದ್ದು ಸ್ಕ್ರಿಪ್ಟ್ ಬರೀಬೇಕು ಅಂತ ಹರ್ಷ ಜೊತೆ ಮಾತಾಡಿದ್ದು ಜ್ಞಾಪಕಕ್ಕೆ ಬಂತು. ನನ್ನ ಮೆಚ್ಚಿನ ಹೀರೊನ ನೋಡೊಕೆ ಆಗಲ್ಲಿಲ್ಲ ಅನ್ನೊದು ನೋವೂ ತಂದಿತು.

ದೇವರು ಇಷ್ಟು ಬೇಗ ಆಟ ಮುಗಿಸಬಾರದಿತ್ತು. ವಿಷ್ಣು ಇನ್ನೂ ಒಂದಿಷ್ಟು ವರ್ಷ ಘರ್ಜಿಸಬೇಕಿತ್ತು.

ಸೋಮವಾರ, ಡಿಸೆಂಬರ್ 28, 2009

ಕ್ರಿಸಮಸ್ ಮರುದಿನ Brampton ನಲ್ಲಿ

ನನ್ನ ಅದೃಷ್ಟಕ್ಕೆ ಬೆಳಿಗ್ಗೆ ಎದ್ದಾಗ ಚುಮು ಚುಮು ಬಿಸಿಲಿತ್ತು ಇಲ್ಲಿನ ಬಿಳಿಯರು ತಮ್ಮ ಕ್ರಿಸಮಸ್ snow ಬಿದ್ದು white ಆಗಿಲ್ಲಿಲ್ಲ ಅಂತಾ ಬೇಜಾರಾಗ್ಗಿದ್ದರೋ ಏನೋ ನನಗಂತೂ ಏನೋ ಖುಷಿ.
ಮುಂದೆ ಕಾಫಿ ಲೋಟ ಇತ್ತು, ಲೋಕಲ್ FM ಸ್ಟೇಷನ್ನಲ್ಲಿ ಕಿಶೋರ ಮತ್ತೆ ಲತಾ ಹಾಡು ಬರ್ಮನನ್ನ ತಾಳಕ್ಕೆ ಹಾಡ್ತಾ ಇದ್ದರು ಕಿಟಕಿ ಹೊರಗಡೆ ಬಂಗಾರದ ಬಣ್ಣದ್ದು ಬಿಸಿಲು ಕಾಣ್ತಾ ಇತ್ತು. ಆಗ ನನ್ನಗನಿಸ್ಸಿದ್ದು ಒಂದೇ "......ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ...".
ಬಹುಶಃ ನನ್ನ ತರ ಆ ಮಹಾಕವಿನು ತಿಂಗಳುಗಟ್ಲೇ ಸರಿಯಾಗಿ ಬಿಸಿಲು ಕಾಣದೇನೇ, ಸಬ್ ಜ಼ಿರೊ ಚಳಿನಲ್ಲಿ ನಾಲ್ಕು ಜಾಕೇಟ್ ಹೊದ್ದುಕೊಂಡು ತಿರುಗಾಡಿದ್ದರೆ ಅವರು ನಾನು ಅಂದುಕೊಂಡಿದ್ದಕ್ಕೆ "ಮೆಚ್ಚಿ ಅಹುದು ಅಹುದು" ಅಂತಾ ಇದ್ದರೇನೊ.