ನೆನಪು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನೆನಪು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜುಲೈ 24, 2017

ಶ್ರೀಮತಿ ಕಿಶೋರಿ ಅಮೋಣಕರ


ಎಪ್ರಿಲ್ ೪ 
ಬೆಂಗಳೂರು

ನಮ್ಮ ದಾದಾ (ತಂದೆ), ರೇಡಿಯೋದಲ್ಲಿ ಬರುವ ಹಿಂದುಸ್ತಾನಿ ಗಾಯನಕ್ಕೆ ತಲೆದೂಗುತ್ತಾ ನಮ್ಮನ್ನೂ(ಅಕ್ಕ,ಅಣ್ಣ) ಅಲೆಯಾಗಿ ಬರುತ್ತಿರುವ ಧ್ವನಿಯನ್ನು ಕೇಳಲೂ ಹೇಳುತ್ತಿದ್ದಾಗ, ಒಲ್ಲದ ಮನಸಿಂದಲೇ ರೇಡಿಯೋ ಮುಂದೆ ಕೂಡುತ್ತಿದ್ದೆವು. 

ಆದರೆ ನಮ್ಮ ಕಣ್ಣು ಗಡಿಯಾರದ ಕಡೆ ಆಗಾಗ ನೋಡುತ್ತಿತ್ತು. ತಂದೆಯವರ ರೇಡಿಯೋ ಕೇಳುವ ಸಮಯ ಮುಗಿದ ತಕ್ಷಣ, ನಾವು ಮುಂದಿನ ಕಾರ್ಯಕ್ರಮವಾಗಿರುತ್ತಿದ್ದ “ನಿಮ್ಮ ಮೆಚ್ಚಿನ ಕನ್ನಡ ಚಿತ್ರಗೀತೆಗಳು” ಕೇಳಲು ಉತ್ಸುಕರಾಗಿರುತ್ತಿದ್ದೆವು. 

ರೇಡಿಯೋದಲ್ಲಿ ಚಿತ್ರಗೀತೆಗಳ ಮೊದಲು ಬರುತ್ತಿದ್ದ ಹಿಂದುಸ್ತಾನಿ ಗಾಯನದ ಸಂಗೀತ ದಿಗ್ಗಜರಾದ ಶ್ರೀ ಭೀಮಸೇನ ಜೋಷಿ, ಶ್ರೀಮತಿ ಗಂಗೂಬಾಯಿ ಹಾನಗಲ್ಲ, ಶ್ರೀ ಮಲ್ಲಿಕಾರ್ಜುನ ಮನ್ಸೂರ್, ಶ್ರೀ ಕುಮಾರ ಗಂಧರ್ವ ಅವರ ಗಾಯನದ ಜೊತೆ ಆಗಾಗ ಶ್ರೀಮತಿ ಪರ್ವಿನ್ ಸುಲ್ತಾನ್, ಶ್ರೀಮತಿ ಪ್ರಭಾ ಅತ್ರೆ ಮತ್ತು ಶ್ರೀಮತಿ ಕಿಶೋರಿ ಅಮೋಣಕರ, ಶ್ರೀಮತಿ ಎಂ ರಾಜಮ್ಮರವರ ಹೆಸರುಗಳೂ ಕೇಳಿ ಬರುತ್ತಿದ್ದವು. ಗಾಯನವನ್ನು ಕೇಳುವಾಗ ನಮ್ಮ ತಂದೆ ಅವತ್ತಿನ ರಾಗದ ಪರಿಚಯ ಮಾಡಿ ಕೊಡುತ್ತಿದ್ದರು. ಅದಕ್ಕೆ ಸಂಭಂದಿಸಿದ ಕಲಾವಿದರ ಬಗ್ಗೆ ಹೇಳುತ್ತಿದ್ದರು. ತಬಲಾದ ತಾಳದ ಬಗ್ಗೆ ನಮ್ಮ ಗಮನ ಸೆಳೆಯುತ್ತಿದ್ದರು. ಒಟ್ಟಾರೆ ನಮಗೆ ಸಂಗೀತವನ್ನು ಆಸ್ವಾದಿಸುವ ಮನಸನ್ನು ಹದಗೊಳಿಸುತ್ತಿದ್ದರು. ಆ ಸಮಯದಲ್ಲಿ ನನಗೆ ಕಿಶೋರಿ ಅಮೋಣಕರ ಅವರ ಅಭಂಗ ಇಷ್ಟವಾಗುತ್ತಿತ್ತು. 

ನಿನ್ನೆ ಶ್ರೀಮತಿ ಅಮೋಣಕರ  ತಮ್ಮ ಸಂಗೀತದ ಅಪಾರವಾದ ಗಾಯನ ಮುದ್ರಿಕೆಗಳನ್ನು ಕೇಳಲು ಮುಂದಿನ ಪೀಳಿಗೆಗೆ ಬಿಟ್ಟು, ಸಂಗೀತ ಸರಸತಿ ಸೇವೆಗೆ ಹೊರಟು ನಿಂತಾಗ, ಅವರಿಗೆ ೮೪ ರ ಹರಯ. ಅವರು ಹಾಡಿದ ಒಂದು ಅಭಂಗ ಇಲ್ಲಿದೆ. 

ಅಂದ ಹಾಗೆ, ಅವರ ಕೇಶ ಶೈಲಿಯೂ ಚಿಕ್ಕ ವಯಸ್ಸಿನಲ್ಲಿ ನನಗೆ ಒಂದು ಕೌತಕದ ವಿಷಯವಾಗಿತ್ತು.

ಶನಿವಾರ, ಜೂನ್ 24, 2017

ಮಣ್ಣೇತ್ತಿನ ಅಮಾವಾಸ್ಯೆ

ನಾ ಈಗ ನಿಮ್ಮ ಜೊತಿ ಹಂಚೋಕೊಳುದು, ಪ್ರತಿವರ್ಷದ ವಾಡಿಕೆಯ ಬಗ್ಗೆ. ಆಯಾ ವರ್ಷದ ಮಣ್ಣೇತ್ತಿನ ಅಮವಾಸಿ ಹಿಂದಿನ ದಿನ ನಮ್ಮ ಅಮ್ಮ ಫೋನ್-ನಾಗ “ಗುರಾಜಾ ನಾಳೆ ಮಣ್ಣೇತ್ತಿನ ಅಮಾಸಿ ನೆನಪ ಅದನ ಇಲ್ಲ?” ಅಂತ ನೆನಪ ಮಾಡೋದು, ಮಾತಾಡಿ ಆದ ಮ್ಯಾಲ ಫೋನ್ ಇಟ್ಟ ನನ್ನ ಮನಸು, ನನಗ ೧೧ -೧೨ ವಯಸ್ಸಿನ ಹುಡುಗನ್ನ್ ಮಾಡಿ ಸಿಂದಗಿ ಚೌಡಮ್ಮ ಗುಡಿ ಮುಂದ ಇರೋ ಕುಂಬಾರ ಓಣಿಗೆ ಕರ್ಕೊಂಡು ಹೋಗೋದು. ಇದು ವರ್ಷದ ವಾಡಿಕಿ.
ಊರ ಬಿಟ್ಟು ೩೦ ವರ್ಷದ ಮ್ಯಾಲ್ ಆದ್ರೂನು ನಮ್ಮ ಅಮ್ಮ ನನಗ ನೆನಪು ಮಾಡೋದು ಬಿಟ್ಟಿಲ್ಲ ಮತ್ತ ನಾನು ಕೂತ ಖುರ್ಚಿಗಿ, ತಲಿ ಆನಸ್ಕೊಂಡು ಆ ನೆನಪು ಚಪ್ಪರಸುದು ಬಿಟ್ಟಿಲ್ಲ.
ಸಣ್ಣಾವ ಇದ್ದಾಗ, ಮಣ್ಣೇತ್ತಿನ ಆಮಾಸಿಗೆ ವಾರದ ಮೊದಲೇ, ದಿನಾಗ್ಲೂ ಸಾಲಿಯಿಂದ ಬಂದ ಕೂಡ್ಲೇ ಪಾಟಿ ಚೀಲ ಮೂಲ್ಯಾಗ ಒಗದು, ನಾನು, ರವಿ, ಉಮೇಶ ಪತ್ತಾರ, ಸಂಜು, ಚನ್ನು ಬ್ಯಾರೆ ಗೆಳೆಯಂದರ ಜೋಡಿ ಕುಂಬಾರ ಓಣಿ ಕಡೆ ಓಡಿದರ, ಮನಿಗಿ ಬರೋದು ದೀಪ ಹತ್ತಿದ ಮ್ಯಾಲೆ.

ನಮ್ಮ ಕಣ್ಣೆದುರಿಗೆನೇ “ಮಣ್ಣಿನ ಮುದ್ದಿ”, ಕುಂಬಾರನ ಕೈಯೊಳಗ ಹಂಗ ಹಂಗೇ ಆಕಾರ ತಾಳಕೊತ್ "ಮಣ್ಣೇತ್ತ" ಆಗೂ ಜಾದೂ ನಮಗ ಎಷ್ಟ ನೋಡಿದರೂ ತೃಪ್ತಿ ಆಗ್ತಿರಲಿಲ್ಲ. ಯಾವ ಮಣ್ಣೇತ್ತ ಎಲ್ಲಿ ತೊಗೋಬೇಕು ಅನ್ನು ಚರ್ಚಾದ ನಡುವ ಊಟಾ, ನಿದ್ದಿ ಸಾಲಿ ಎಲ್ಲಾ ಮರಿತಿತ್ತು. ಹಬ್ಬದ ದಿವಸ ಮೈಬುಬನ (ಮೈಹಿಬೂಬ್) ಜೋಡಿ ಹೋಗಿ, ಜೋಡ ಮಣ್ಣೇತ್ತ ತೊಗೊಂಡು ಬರೋ ಸಂಭ್ರಮ ಹೇಳ್-ಲಿಕ್ಕಿ ಶಬ್ದಗಳೇ ಇಲ್ಲ. ಭೀಮ ಭಟ್ಟರು ಮುಂಜಾನೆ ಪೂಜಾಕ್ಕ್ ಬರುದ್ರಾಗ, ಅಮ್ಮ ದೇವರ ಮುಂದ ಜೋಡಿ ಮಣ್ಣೇತ್ತು ಇಟ್ಟು ಅವಕ್ಕ ಅರಿಶಿಣ-ಕುಂಕುಮ ಇಟ್ಟು, ಮುಂದ ಚಂದ ರಂಗೋಲಿ ಹಾಕಿ ತಯಾರಿ ಮಾಡತಿದ್ಲು. ಭೀಮ ಭಟ್ರು ಬಂದವರೇ ಮಣ್ಣೇತ್ತು ನೋಡಿ, “ಹುಂ ಮಣ್ಣೇತ್ತು ಬಂದಾವ?" ಅನ್ಕೊತ ನನ್ನ ಕಡಿ ನೋಡಿ "ಗುರಾಜಾ, ನಿನ್ನು ಎತ್ತು ಭಾಳ ಭರ್ಜರಿ ಅವ” ಅಂತ ತಾರೀಫ್ ಮಾಡಿ ದೇವರ ಪೂಜಾ ಶುರು ಮಾಡ್ತ ಇದ್ದರು. ನಾನೋ ಆರಾಧನಾ ಭಾವದಿಂದ ಅವರು ಮಾಡೋ ಪೂಜಾ ನೋಡ್ತಾ ಇದ್ದೆ. ಘಂಟಿ ಬಾರ್ಸ್ಕೊತ್ ಮಣ್ಣೇತ್ತಿಗು ಮಂಗಳಾರತಿ ಮಾಡೋವಾಗ ಮುಖದ ಮ್ಯಾಲ್ ಹಿಗ್ಗು ಹಿರಿತಿತ್ತು. “ಹಾಂ ಪೂಜಾ ಆಯಿತು, ನೀ ಒಂದು ಎತ್ತು ತೊಗೋ ಬೇಕಾದ್ರ” ಅಂದದ್ದೇ ತಡ ಒಂದು ಎತ್ತು ತೊಗೊಂಡು, ಗೆಳೆಯಂದರ ಜೊತಿ ಆಡಲಿಕ್ಕಿ ಹೊರಗ ಹಾರಿದರ ಮುಗಿತು, ಹಿಂದ ಅಮ್ಮ “ಶಾವಿಗಿ ಪಾಯಸ ಮಾಡಿರ್ತೀನಿ ಲಗುನೇ ಬಾ” ಅನ್ನೋದು ಕಿವಿಗಿ ಬೀಳತಿರಲ್ಲಿಲ್ಲ. ಚುರುಮುರಿಲೇ ಸರ ಮಾಡಿ, ಮಣ್ಣೇತ್ತಿನ ಹಣಿಗಿ ಕುಂಕಮ ಇಟ್ಟು ಸಂಗಪ್ಪನ್ನ ಗುಡಿ ಮುಂದಿನ ಶಡಿಕಿನ (ಟಾರ್ ರೋಡ) ಮ್ಯಾಲ್ ಎತ್ತು ಇಟ್ಕೊಂಡು ಓಡೋಡಿ ಆಟ ಮುಗಿಸಿ ಮನಿಗಿ ಬರುದ್ರಾಗ ಮಧ್ಯಾನ್ಹ ಮೂರೂವರಿ ಆಗಿರ್ತ್ತಿತ್ತು. ದಾದಾನ ಕೈಲಿ ಏಟು, ಅಮ್ಮನ ಕೈಲಿ ಬೈಗಳು ತಿಂದು, ಶಾವಿಗಿ ಪಾಯಸಕ್ಕ ಕೈ ಹಾಕತಿದ್ದೆ. ಮಣ್ಣೇತ್ತಿನ ಅಮಾಸಿ ನಿಮಗ ಶುಭ ತರಲಿ. ಮನ್ಯಾಗ ಆಕಳ-ಎತ್ತು. ಕಟ್ಟು ಶಕ್ತಿ ಆ ದೇವರು ನಿಮಗ ಎಲ್ಲಾರಿಗೂ ಕೊಡಲಿ.

ಬುಧವಾರ, ಜನವರಿ 4, 2017

ಅಮ್ಮನ ಪ್ರೀತಿ ಅಂದ್ರ











ಅಮ್ಮನ ಪ್ರೀತಿ ಅಂದ್ರ

 

ಅಮ್ಮನ ಪ್ರೀತಿ ಅಂದ್ರ

ಹಗಲನಾಗ, ಕಣ್ಣಿಗಿ ಕಾಣಸು ತನ ಇರು ನೀಲಿ ಮುಗಿಲ,

ರಾತ್ರಿ ಆದಾಗ, ಅದೇ ಮುಗಿಲನಾಗ ಚಲ್ಲಾಡಿರೋ ಚುಕ್ಕಿ ಸಾಲ;

ಸುಡು ಬಿಸಿಲಾಗ ಸಿಗು ಬೇವಿನ ಗಿಡದ ನೆರಳ,

ಅದರ ಕೆಳಗ ಕೂತಾಗ ಸೂಸಿ ಬರು ತಣ್ಣಗನ ಗಾಳಿ;
 

ಅಮ್ಮನ ಪ್ರೀತಿ ಅಂದ್ರ

ಬಿಜಾಪುರದಿಂದ “ನನಗ ಅಂತ ತಂದ” ಕೆಂಪನ ಅಂಗಿ,

ಕುಂದಾ ಮೌಶಿ ಕೈಲಿ ಮುದ್ದಾಂ ಹೇಳಿ ತರಿಸಿದ ರಾಪಿಡೆಕ್ಸ್ ಪುಸ್ತಕ

ಧಾಂದಲಿ ಮಾಡಿದ್ದಕ್ಕ ಎರಡೂ ಕಪಾಳಿಗೆ ಕೊಟ್ಟ ಏಟ

ಓದ್ಲಿಕ್ಕಿ ಕೈಗಿ ಕೊಟ್ಟ ಸಾನೆ ಗುರೂಜಿಯವರ “ಶ್ಯಾಮನ ತಾಯಿ” ಪುಸ್ತಕ
 

ಅಮ್ಮನ ಪ್ರೀತಿ ಅಂದ್ರ

ಮುಂಜಾನೆ ನಾಷ್ಟಾಕ ಮಾಡೋ ಅವಲಕ್ಕಿ ಸುಸಲ,

ಅದರ ಮ್ಯಾಲ ಹಾಕೋ “ಇನ್ನಾ ಒಂದು ಚಮಚ” ತುಪ್ಪ;

ಸಂಜಿಗಿ ಸಾಲಿ ಬಿಟ್ಟು ಬಂದಾಗ ತಿನ್ಲಿಕ್ಕಿ ಕೊಡೊ ಹುರುದಿದ್ದ ಶೇಂಗಾ ಬೆಲ್ಲಾ;

ಮುಂಜವಿಯೊಳಗ ತುತ್ತ ಮಾಡಿ ತಿನಿಸಿದ ಮಾತೃ ಭೋಜನ;

 
ಅಮ್ಮನ ಪ್ರೀತಿ ಅಂದ್ರ

ನಸುಕನಾಗ ಎದ್ದು ನಳದ ಮುಂದ ಇಡತಿದ್ದ ಕೊಡದ ಸಾಲ

ಬಕಿಟ್ಟನಾಗ ಸ್ನಾನಕ್ಕ ಇಡು ಬಂಬನಾಗಿನ ಬಿಸಿ ನೀರ

ಮನಿ ಮುಂದ ಮುಂಜಾನೆ ಅರಳಿ ನಿಂತ ಮುಳು ಜಾಜಿಗಿ ಹೂವ,

ಮಳಿ ಬಂದು ನಿಂತರೂ, ಪನ್ನೋಳಗಿಯಿಂದ ಬೀಳತಿರು ನೀರ;


ಅಮ್ಮನ ಪ್ರೀತಿ ಅಂದ್ರ

ಶುಕ್ರವಾರ ಸಂಜಿಗಿ ಹಾಡೋ ಕೊಲ್ಹಾಪೂರದ ಮಹಾಲಕ್ಷ್ಮೀ ಹಾಡ,

ಆರತಿ ಮಾಡಿ, ಪ್ರಸಾದಕ್ಕ ನನ್ನ ಕೈಗಿ  ಹಾಕೋ ಪುಠಾಣಿ ಸಕ್ಕರಿ;

ಗಣಪತಿ ಹಬ್ಬ, ದೀಪಾವಳಿ ಆರತಿ, ನವರಾತ್ರಿ ದೀಪ,

ಹಬ್ಬದ ಊಟಕ್ಕ ಬಡ್ಸೋ ಕೋಸಂಬರಿ, ಬುರುಬುರಿ, ಮತ್ತ ಹೂರಣ

 

ಅಮ್ಮನ ಪ್ರೀತಿ ಅಂದ್ರ

ಕಾರ್ತಿಕನಾಗ ಸಂಗಪ್ಪಗ ಹಚ್ಚು ಕಾಕಡಾರತಿ,

ಸಿಂದಗಿ ಸದ್ಗುರು ಭೀಮಾಶಂಕರನ ಪಾದ ಪೂಜಾ;

ಯಲಗೂರದಪ್ಪನ ಹೋಳಿಗಿ ಪ್ರಸಾದ, ಗೊಲ್ಲಾಳಪ್ಪನ ಅಭಿಷೇಕ,

ಕಾಶಿಲಿಂಗನ ಕಲಸಕ್ಕರಿ, ಎಲ್ಲಮ್ಮನ ನೈವೇದ್ಯ;

 




ಶನಿವಾರ, ಮಾರ್ಚ್ 28, 2015

ಸಿಂದಗಿಯ ಮಣ್ಣೂರ ಸರ್


ಸಿಂದಗಿಯ ಮಣ್ಣೂರ ಸರ್
ನಾಕನೆತ್ತೆ ಪರೀಕ್ಷಾ ಮುಗಿಸಿ, ಬ್ಯಾಸಗಿ ಸೂಟಿಯೊಳಗ ನಾ ಮಾಡು ಧಾಂಧಲೆ ಮಾಡುದನ್ನ ತಾಳಲಾರದೆ ಅಮ್ಮ ಆಗಾಗ ನನಗ ಬೈಕೋತ ಅಂತಿದ್ಲು, “ಸಾಲಿ ಸುರು ಆಗ್ಲಿ, ಈ ಸರ್ತಿ ಐದನೆತ್ತೆಕ ಮಣ್ಣೂರ ಸರ್ ನಿನಗ ಬರೋಬರಿ ಮಾಡ್ತಾರ”   ಬಹುಶಃ ಆ ವರ್ಷ ೫ನೆತ್ತೆಕ್ಕ ಸೇರೋ ಸಿಂದಗಿಯಾಗಿನ ಮಕ್ಕಳ ಎಲ್ಲಾ ಅಮ್ಮಂದ್ರು, ತಮ್ಮ ಮಕ್ಕಳಿಗಿ ಇದೇ ಮಾತು ಹೇಳಿರ್ತಿದ್ದರು ಅಂತ ನನ್ನ ಅಂಬೋಣ.

ಊರಾಗಿನ್ನ ಮಕ್ಕಳನ್ನ ಓದ್ಸಿ, ಅವರನ್ನ ಮನುಶ್ಯಾರನ್ನ ಮಾಡೋ ಜವಾಬ್ದಾರಿ  ಆಗಿನ ಕನ್ನಡಾ ಸಾಲಿ ಮಾಸ್ತರರಿಗೆ ಇರ್ತಿತ್ತು. ಆವಾಗಿನ ವ್ಯಾಳ್ಯಾದಾಗ ನಮ್ಮ ದಾದಾ-ಅಮ್ಮನಂಗ, ಸಿಂದಗಿ ಊರಾಗಿನ ಅಪ್ಪ-ಅಮ್ಮಂದಿರಿಗೆಲ್ಲಾ ಮಕ್ಕಳು ಸಾಲಿ ಕಲ್ತು ಶ್ಯಾಣೆ ಆಗ್ಲಿಕ್ಕಿ ಇದ್ದ ಏಕೈಕ ಆಸರೆ ಅಂದ್ರ “ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ” ಯ ಮಣ್ಣೂರ ಸರ್ ಒಬ್ಬರೇ. ಅದೂ ಅಲ್ದೆ ಅಷ್ಟೊತ್ತಿಗೆ ಆಗ್ಲೇ ನಮ್ಮ ಅಣ್ಣ ಮತ್ತ ಅಕ್ಕ ಅವರ ಕೈಯಾಗ ಕಲ್ತು “ಡಾಕ್ಟರ್ ಮಕ್ಕಳು ಭಾಳ ಶ್ಯಾಣೆ ಇದ್ದಾರ ” ಅಂತ ಮಣ್ಣೂರ ಸರ್ ಕಡಿಯಿಂದ ಶಭಾಷಗಿರಿ ತೊಗೊಂಡಿದ್ದರು. ಸಿಂದಗಿ ಅಷ್ಟೇ ಅಲ್ದೆ,  ಬ್ಯಾರೆ ಊರಿಂದಲೂ ೫ನೆತ್ತೆ ಓದು ಮಕ್ಕಳು ಮಣ್ಣೂರ ಸರ್ ಕೈಯಾಗ ಕಲ್ತು ಶ್ಯಾಣ್ಯಾ ಆಗ್ಲಿಕ್ಕಿ ಬರತಿದ್ದರು.

ಮಣ್ಣೂರ ಸರ್ ತಮ್ಮ  ಘೋಷ್ ವಾಕ್ಯ “ಛಡಿ ಛಂ ಛಂ...ವಿದ್ಯಾ ಘಂ ಘಂ” ಅನ್ಕೊತ ಎಡಗೈನೊಳಗ ಹಸಿ ಜ್ಹಬರಿ (ಬಡಿಗಿ-ಬೆತ್ತ) ಆಡಿಸಿದರ ನನ್ನಂತಾ ಉಡಾಳ ಹುಡುಗರ ಚಡ್ಡಿ ಒದ್ದಿ ಆಗೋದು ಪಕ್ಕಾ ಇರ್ತಿತ್ತು. ಅವರು ಬೋರ್ಡ್ ಮ್ಯಾಲ ಬರಿಯೋ ಗಣಿತ, ಕನ್ನಡ ವ್ಯಾಕರಣ ಮತ್ತ ಇಂಗ್ಲಿಷ್ ಪದಗೋಳು ಎಲ್ಲಾ, ಹಂಗೆ-ಹಂಗೆ ಗಾಳ್ಯಾಗ ತೆಲ್ಯಾಡಕೊತ ಬಂದು ಎಲ್ಲಾ ಹುಡುಗರ ತಲಿಯೋಳಗ ಕೂಡತ್ತಿದ್ವು, ಅವು ಏನರೆ ಹುಡುಗರು ತಲ್ಯಾಗ ಕೂತಿಲ್ಲ ಅಂತ ಮಣ್ಣೂರ ಸರ್-ಗಿ ಗೊತ್ತ ಆಯಿತು  ಅಂದ್ರ ಆ ಹುಡುಗರ ಕುಂಡಿ ಮ್ಯಾಲಿನ ಚಡ್ಡಿ ಹರಿಯೋ ಹಂಗ ಬಿಗಿತಿದ್ದರು. ಹಿಂಗಾಗಿ ಅವರ ಕೈಯಾಗ ಕಲ್ತ ಹುಡುಗರಿಗೆ ಮುಂದ ಮೂವತ್ತು ವರ್ಷ ಆದ್ರೂ ಕನ್ನಡದ ವ್ಯಾಕರಣದಾಗಿನ “ಸಂಧಿ ಸಮಾಸಗಳು ”, ಗಣಿತದಾಗಿನ “ವಿಷಮ ಭಿನ್ನರಾಶಿ” ಮರ್ತಿದ್ದರ ದೇವರ ಆಣಿ ತೊಗೋರಿ.

  ಕೂಡುಸು-ಕಳಿಯೋ ಲೆಕ್ಕ ಹೇಳಿ ಕೊಡುದ್ರೋಳಗ ಅಂತೂ ಮಣ್ಣೂರ ಸರ್-ದು ಎತ್ತಿದ ಕೈ. ಹುಡುಗರಿಗೆ ಮಗ್ಗಿ ಕೇಳಲಿಕ್ಕಿ ಅವರದೇ ಆದ ಒಂದು ಶೈಲಿ ಇತ್ತ್ತು. ನೆಲದ ಮ್ಯಾಲ ಕೂತ ಹುಡುಗರ ಸಾಲಿನ ನಡುವ ಸಾವಕಾಶ ಹೆಜ್ಜಿ ಇಟಕೊತ್, ಜ್ಹಬರಿ ಗುಂಡಕ (ವೃತ್ತಾಕಾರವಾಗಿ) ತಿರಗಸಕೊತ, “ಎಷ್ಟ ಎಷ್ಟಲೆ ಅರವತ್ನಾಲ್ಕು” ಅಂತಾನೋ “ಎಷ್ಟ ಆರಲೇ ಎಪ್ಪತ್ತೆಂಟು” ಅಂತಾನೋ ಕೇಳೋರು. ಅವರ ಬಾಯಿಂದ ಬರೂ ಪ್ರಶ್ನೆ ಮುಗಿದರಲ್ಲಿಕ್ಕಿಲ್ಲ ನಾವು ಎಲ್ಲಾ ಹುಡುಗರು ಒಂದೇ ಧನಿಯೊಳಗ ಉತ್ತರ ಹೇಳಬೇಕಿತ್ತು. ಯಾವ ಹುಡುಗನ ಧ್ವನಿ ಬಂದಿಲ್ಲ ಅಂತ ಸೂಕ್ಷ್ಮವಾಗಿ ಕೆಳಸ್ಕೊತ್ತಿದ ಸರ್ ಅವನಿಗೆ ಬರೋಬ್ಬರಿ ಬಿಗಿತಿದ್ದರು. ಏಟ ತಿಂದ ಆ ಹುಡುಗ ಮುಂದ ತಪ್ಪ ಮಗ್ಗಿ ಹೇಳುವಂತಾ, ತನ್ನ ತಪ್ಪ ಜೀವನ ಪೂರ್ತಿ ಮಾಡ್ತ ಇರಲ್ಲಿಲ್ಲ.

ಸಾಲಿಗಿ ಹೋಗೋ ಹುಡುಗರಿಗಿ ಮೂವತ್ತರ ತನಕ ಮಗ್ಗಿ ಬರಲ್ಲಿಲ್ಲ ಅಂದ್ರ ಊರಾಗಿನ ಮಂದಿ, “ಏಯ್ ಮಾಸ್ತರಗ ಸಾಲಿ ಕಲಸಲ್ಲಿಕ್ಕಿ ಬರಂಗಿಲ್ಲ್ಲ” ಅಂತಿದ್ದರು.ಆದ್ರ ಮಣ್ಣೂರ ಸರ್ ಕೈಯಾಗ ಕಲ್ತ ಹುಡುಗರಿಗಿ ಮಂದಿ ಮುಂದ ಮರ್ಯಾದಿ ಇರ್ತಿತ್ತು. ಬಜಾರಕ ಸಾಮಾನ ತರಲಿಕ್ಕಿ ಹೋದ ಹುಡುಗಗ ಅಂಗಡಿಯಾಂವ ತನ್ನ ಲೆಕ್ಕಾನೂ “ಮಣ್ಣೂರ ಸರ್ ಹುಡುಗ” ಕೈಲೇ ಮಾಡಿಸ್ಕೊಂಡು, ಕೈಯಾಗ ಬೆಲ್ಲಾ ಕೊಟ್ಟು ಕಳಸ್ತಿದ್ದ.

ಇಂಥಾ ಸರ್ ಕೈಯಾಗ ೫ನೆತ್ತೆ ಓದು ಮುಂದಾಗ, ಒಂದು ಕಥಿ ನಡೀತು. ಆದ್ರ ಆ ಕಥಿ ಹೇಳೋ ಮೊದ್ಲು ಇಲ್ಲಿ ನನ್ನ ಬಗ್ಗೆ ನಿಮಗೊಂದು ವಿಷ್ಯ ಹೇಳಬೇಕು. ಆಕ್ಷರ ಓದಲಿಕ್ಕಿ ಬಂದಾಗಿಂದ ನನಗ ಸಾಲಿ ಪುಸ್ತಕ ಒಂದ ಬಿಟ್ಟು, ಕೈ ಸಿಕ್ಕದ್ದೆಲ್ಲಾ ಓದು ಚಟ ಹತ್ತಿತ್ತು, ಕಥಿ,ಕಾದಂಬರಿ, ಪ್ರಜಾಮತ, ಕಸ್ತೂರಿ, ಕರ್ಮವೀರ, ಚಂದಮಾಮ ಹಿಂಗೆ ಒಂದ- ಎರಡ?... ಎಲ್ಲಾ ಓದತಿದ್ದೆ ಮತ್ತ ಎಲ್ಲಿ ಅಂದ್ರ ಅಲ್ಲಿ ಕೂತು ಓದತಿದ್ದೆ. ಯಾರದರ ಮನ್ಯಾಗ, ಅಂಗಡಿಯಾಗ, ಇಲ್ಲಾ ನಮ್ಮ ಸಾಲಿ ಮುಂದಿನ ಬಸ್ –ಸ್ಟಾಂಡನಾಗಿರೋ ಬುಕ್ –ಸ್ಟಾಲನಾಗ, ಹೋದಲ್ಲಿ, ಬಂದಲ್ಲಿ ಎಲ್ಲಿ ಬೇಕೋ ಅಲ್ಲಿ ಓದ್ಕೋತ ಕೂಡತಿದ್ದೆ. ಇದರ ಸಲುವಾಗಿ ಅಮ್ಮನ ಕೈಲಿ, ದಾದಾನ ಕೈಲಿ ಬೇಕಾದಷ್ಟು ಏಟು ತಿಂತಿದ್ದೆ.

ಇಂಥಾ ಪ್ರಚಂಡ ಬುದ್ಧಿ ಇರೋ ನನ್ನಂತೋನಿಗಿ ಸಾಲಿಗಿ ಹೋಗೋ ಹಾದಿಯೋಳಗ ಇದ್ದ ಪುಸ್ತಕದ ಅಂಗಡಿಯಾಂವ, “ಏ ಗುರಾಜಾ..ಈ ತಿಂಗಳದ್ದು ಚಂದಾಮಾಮ ಬಂದದ ತೊಗೊಂಡು ಹೋಗು” ಅಂದ. ಬಾಲ ಹನುಮಾನ ಕೆಂಪನ ಸೂರ್ಯಾನ ಕಡೆ ಹಾರೋ ಚಿತ್ರ ಇರೋ “ಚಂದಾಮಾಮ” ಕೈಗಿ ಕೊಟ್ಟ, ನಾನು ಅದನ್ನು ಪಾಟಿ-ಚೀಲನಾಗ ಸೇರಿಸಕೊಂಡು ಓಡಿದೆ. ಸಾಲಿಗಿ ಹೋದೆ, ಪ್ರಾರ್ಥನಾ ಮುಗಿತು, ನನ್ನ ಜಾಗದಾಗ ಹೋಗಿ ಕೂತೆ. ಮಣ್ಣೂರ ಸರ್ ಬಂದ್ರು, ಕನ್ನಡ ವ್ಯಾಕರಣದ  ಅಭ್ಯಾಸ ಸುರು ಆಯಿತು. ಆದ್ರ ಚೀಲದಾಗ ಕೂತ “ಚಂದಮಾಮ” ಸುಮ್ಮನ  ಕೂಡ್ಲಿಲ್ಲ, ನನಗ ಕೈ ಮಾಡಿ ಕರಿಲಿಕ್ಕಿ ಹತ್ತಿದ. ನಾನು ಸಾವಕಾಶ ಅದನ್ನ ಹೊರಗ ತಗದು ನನ್ನ ನೋಟಬುಕ್ಕ ನಡುವ ಇಟ್ಟು ಅದರಾಗಿನ “ವೀರ ಹನುಮಾನ” ಓದ್ಲೀಕ್ಕಿ ಸುರು ಮಾಡಿದೆ. ಮುಗಿಲನಾಗ ತೇಲೋ ಹನುಮಾನ ಕಥಿ ಓದೋಕೊತ  ನಾನು ನಂದೇ ಲೋಕದಳೋಗ ಮುಳುಗಿದ್ದೆ. ಒಮ್ಮಿಂದೊಮ್ಮೆಲೆ “ಎ...ಲೇ....” ಅನ್ನೋ ಭಯಾನಕ ಆವಾಜ್ ಕಿವಿಯಿಂದ ಸಾವಕಾಶ ಹೋಗಿ ಮೆದುಳಿಗಿ ಮುಟ್ಟುದರೋಳಗ, ಮಣ್ಣೂರ ಸರ್ ಕೈಯೊಳಗಿನ ಜ್ಹಬರಿ ನನ್ನ ದೇಹದ ಹಿಂಭಾಗಿನ ಸೂಕ್ಷ ಭಾಗಗಳ ಮ್ಯಾಲೆಲ್ಲಾ ಕುಣಿದಾಡುತ್ತಿತ್ತು. ಏಟಿನಿಂದ ತಪ್ಪಸ್ಕೋಳಿಕ್ಕಿ ನಾನು ಸಾಲಿ ತುಂಬಾ ಓಡಾಡಿದೆ, ಸರಿಯಾದ ಜಾಗಗಳಿಗಿ ಹೊಡಿಲಿಕ್ಕಿ ಸರ್ ನನ್ನ ಹಿಂದಿಂದೆನೇ ಬಂದ್ರು ಮತ್ತ ಜ್ಹಬರಿ ಮುರಿಯೋತನಕ ಹೊಡದರು. ಅವತ್ತ ಮನಿಗಿ ಹೋಗೋತನ ಬಿಕ್ಕಳಿಸಿ ಅಳಕೊತ ಹೋಗಿದ್ದೆ. ಆದ್ರ ಮಣ್ಣೂರ ಸರ್ ಅವತ್ತ ಹೇಳಿಕೊಡ್ತಿದ್ದ “ವಿಭಕ್ತಿ ಪ್ರತ್ಯಯ” ಇವತ್ತಿಗೂ ಮರ್ತಿಲ್ಲ,

ಉಪಸಂಹಾರ
ಮಣ್ಣೂರ ಸರ್ ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಹುಡುಗರಿಗೆಲ್ಲಾ ಇಷ್ಟವಾದವರು. ಗೌರವರ್ಣದ, ನೆಟ್ಟಗಿನ ಮೂಗಿನ, ಹಣೆ ತುಂಬಾ ವಿಭೂತಿ, ಶುದ್ಧ ಬೆಳ್ಳಗಿನ ಧೋತರ, ನೆಹುರು ಶರ್ಟ ತೊಟ್ಟ ಮಣ್ಣೂರ ಸರ್ ನಡೆದು ಬರುತಿದ್ದರೆ ಎಂತಹವರಿಗೂ ಗೌರವ ಭಾವನೆ ಬರುತ್ತಿತ್ತು. ಶುದ್ಧ ಕನ್ನಡ ಭಾಷೆಯ ಬಳಕೆ, ಶರಣರ ಜೀವನ ಶೈಲಿ ಅವರದಾಗಿತ್ತು.

ಹುಡುಗರ ಜೊತೆ ತುಂಟತನವೂ ಇತ್ತು. ತುಂಬಾ ತೆಳ್ಳಗಿದ್ದ ನನ್ನನ್ನು “ವಿಭೂತಿ ಉಂಡಿ” (ಬೇಯಿಸಿದ ಮೊಟ್ಟೆ) ತಿಂದರೆ ದಪ್ಪಗಾಗುತ್ತಿ ಎಂದು ರೇಗಿಸುತ್ತಿದ್ದರು. ಯಾರಾದರೂ ಶಾಲೆ ತಪ್ಪಿಸಿದರೆ, ಆ ಹುಡುಗನಿಗೆ “ಹೊಡಿ ಚೈನಿ” (ಮಜಾ ಉಡಾಯಿಸು) ಎಂದು ಉಪದೇಶ ಮಾಡುತ್ತಿದ್ದರು.

 

ಭಾನುವಾರ, ಜನವರಿ 6, 2013

ಚೂಡಾ ಮಾಡು ಸಂಗಪ್ಪನೂ, ಪಿಜ್ಜಾ ಹುಡುಕೊಂಡ ಹೋದ ಆಮೇರಿಕನ್ನೂ..


ಚೂಡಾ ಮಾಡು ಸಂಗಪ್ಪನೂ, ಪಿಜ್ಜಾ ಹುಡುಕೊಂಡ ಹೋದ ಆಮೇರಿಕನ್ನೂ..

ಗುರುರಾಜ ಕುಲಕರ್ಣಿ (ನಾಡಗೌಡ)


ನಾ ಈಗ ಹೇಳುದು ಸುಮಾರು ೨೦-೨೫ ವರ್ಷದ ಹಿಂದಿಂದು. ನಮ್ಮೂರ ಸಿಂದಗಿ, ಹೆಸರಿಗಿ ತಾಲೂಕ ಆಗಿದ್ದರೂ, ಜನಸಂಖ್ಯಾನೂ ಕಮ್ಮಿ ಬಾಕಿ ಸೌಲಭ್ಯಗಳೂ ಕಮ್ಮಿ. ಏನೇನು ಇತ್ತು ನಿಮ್ಮ ಊರಾಗ ಅಂತ ಕೇಳಿದ್ರ, ಒಂದು ಸರಕಾರಿ ಕನ್ನಡ ಸಾಲಿ, ಒಂದು ಪ್ರೈವೆಟ್ ಹೈಸ್ಕೂಲು, ಊರಿಂದ ದೂರ ಇರೊ ಒಂದು "ಮ್ಯಾಲಿನ" ಕಾಲೇಜ್, ಇನ್ನೊಂದು ಊರ ಮುಂದ ಇರೊ "ಕೆಳಗಿನ" ಕಾಲೇಜ್. ಇದು ಬಿಟ್ರೆ ಒಂದೆರಡು ಬ್ಯಾಂಕಗಳು ಮತ್ತ ಒಂದೆರಡು ಸಿನೆಮಾ ಥಿಯೇಟರಗಳು. ಊರ ಮುಂದ ಇರೋ ಸಂಗಪ್ಪನ ಗುಡಿ, ಊರಾಗಿರೊ ಸಣ್ಣ ಸಣ್ಣ ಹಣಮಪ್ಪನ ಗುಡಿಗೊಳು ಮತ್ತ ಮಠಗೊಳು. ಊರಾನ ಮಂದಿಗಿ ಎಲ್ಲಾರಿಗೂ ಒಬ್ಬೋರಿಗೊಬ್ಬರಿಗೆ ಆತ್ಮೀಯತೆ ಮತ್ತು ಗೌರವ. ಮಗನೋ ಮಗಳೋ ೧೦ನೇ ಅಂತಾದ್ದು ಪಾಸಾದ್ರ ನಾಲ್ಕು ಓಣಿಗಿ ಪೇಡೆ ಹಂಚತ್ತಿದ್ದರು. ಆಕಳೊ ಇಲ್ಲಾ ಎಮ್ಮಿನೊ ಕರ ಹಾಕಿದರ ಗಿಣ್ಣದ ಹಾಲು ಮನಿ ಮನಿಗಿ ಕಳಸತ್ತಿದ್ದರು.ಹೊಲದಾಗಿನ ಸದಿ/ಕಸ ತಗಸ್ಲಿಕ್ಕಿ ಹೋದವರು, ಸಂಜಿ ಮುಂದ ಬರು ಮುಂದಾಗ "ಹತ್ತರಕಿ" ಹಿಡಕೊಂಡು ಬಂದು ಆಜು-ಬಾಜು ಮನಿಯವರಿಗೆಲ್ಲಾ ಕೊಡೊರು. ಇಂತಾ ಊರಾಗ ಕಳೆದ ನಮ್ಮ ಬಾಲ್ಯದ, ಸುಖದ ಅನುಭೂತಿನೇ ಬ್ಯಾರೆ. ಈಗ ನಿಮ್ಮ ಮುಂದ ಹೇಳೂದು ಅಂತಾ ಒಂದು ಕಥಿನೇ. ಅದು ಸಂಗಪ್ಪ ಮಾಡೋ ಚೂಡಾದ ಕಥಿ, ಸಾವಕಾಶವಾಗಿ ಕೇಳುವವರಂತವರಾಗಿ.


ಊರು ಅಂದ ಮ್ಯಾಲ ಹೋಟೆಲಗಳು ಇರಬೇಕಲ್ಲ. ಹೂಂ, ಅವು ಇದ್ದವು. ಬಜ಼ಾರಾನಾಗ ಉಡುಪಿಯವರದು ಎರಡು ಹೋಟೆಲ ಇದ್ದವು.ಬಜ಼ಾರದ್ದು ಒಂದೊಂದು ತುದಿಗಿ ಒಂದೊಂದು ಇದ್ದವು.ಬಜ಼ಾರಕ ಅಡ್ಡ ಇರು ರಸ್ತಾದೊಳಗ ಕುಲ್ಕರ್ಣಿ ಬಿಂದುಂದು ಒಂದು ಚಹಾದು ಅಂಗಡಿ ಇರತ್ತಿತ್ತು. ಅದು ಬಿಂದುನ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಆಗಾಗ ಅಂಗಡಿ ಶುರು ಆಗುದು ಇಲ್ಲಾ ಬಂದ್ ಆಗುದು. ಬಸ-ಸ್ಟ್ಯಾಂಡ್ ಸುತ್ತಮುತ್ತಲು ಒಂದು ನಾಲ್ಕಾರು ಚಾ ಅಂಗಡಿ ಇದ್ದವು. ಸಂಗಮದವರ ಚಾ ಅಂಗಡಿಯೊಳಗ ನಮ್ಮೂರ ಮಂದಿ ಕೂತು ಚಾ ಕುಡುಕೊತ್, ಬೀಡಿ ಅಡಿಕಿ ಜೋಡಿ ಹರಟಿ ಹೊಡಕೊತ ಕೂತಿರ್ದಿದ್ದರು. ಮಸೀದಿ ಮುಂದಿನ ರಸ್ತಾದಾಗ, "ಉಮ ಹೋಟೇಲ" ಅಂತ ಕನ್ನಡ-ಇಂಗ್ಲೀಷನಾಗ ಬರ್ದಿರೊ ಬೋರ್ಡ ಇರುವಂತಾ ಉಡುಪಿಯವರದು ಇನ್ನೊಂದು ಚಾ ಅಂಗಡಿ ಇತ್ತು. ಎಲ್ಲಾ ಚಾ ಅಂಗಡಿಯೊಳಗ ಸಿಗತಿದ್ದದ್ದು, ಮುಂಜಾನೆ ಅವಲಕ್ಕಿ ಸುಸಲ, ಉಪ್ಪಿಟ,ಪುರಿ-ಪಿಟ್ಲ, ಭಜ್ಜಿ ಸಂಜಿ ಆದ್ರ ಚುರುಮುರಿ ಚೂಡ. ಇಡ್ಲಿ-ವಡಾ ಇಲ್ಲಾ ದೋಸಾದಂತಾ ಸ್ಪೇಶಲ್ ತಿನಿಸು ಬೇಕು ಅಂದ್ರ ಉಡುಪಿ ಜಯಂತನವರ ಹೋಟೇಲಗೆ ಹೋಗಬೇಕಿತ್ತು.ಆದ್ರ ಪೂರಿ-ಭಾಜಿಯೊಳಗ ಇಲ್ಲಾ ಚೂಡಾದೊಳಗೇ ಸ್ಪೇಶಲ್ ಬೇಕು ಅಂದ್ರ ಬಜ಼ಾರ ನಡುವ, ಪೊಸ್ಟ ಆಫೀಸ್ ಹತ್ತರ, ಹೆಣ್ಣ ಮಕ್ಕಳ ಸಾಲಿ ಮುಂದ ಇರು ಬಮ್ಮಣ್ಣಿಯವರ ಹೋಟೇಲಗಿ ಹೋಗಬೇಕಿತ್ತು.

ನಾನು ಎಂಟನೇತ್ತಕ್ಕ ಬಂದಾಗ, ಬಜ಼ಾರ ಹತ್ತರ ಇರು ಎಂಟು ಮನಿ ಇರು ವಠಾರದಂತಹ “ರಮಾ ನಿವಾಸ”ದೊಳಗ, ಒಂದ ಮನಿಗಿ ಬಾಡಿಗಿಗಿ ಬಂದ್ವಿ. ಅರ್ಜೆಂಟಗಿ ಇಲ್ಲಾ ಗಡಿಬಿಡಿ ಆದಾಗ ಮುಂಜಾನೆ ಹೋಟೆಲಗಿ ಹೋಗಿ ನಮಗೆಲ್ಲಾರಗೂ ಪೂರಿ-ಭಾಜಿ ಮುಂಜಾನೆ ಟಿಫಿನಗಿ ಕಟ್ಟಸಕೊಂಡು ಬರುವಂತಾ ಪರ್ಮಿಷನ ದಾದಾ ಕೊಟ್ಟಿದ್ದರು. ಸಾಮಾನ್ಯವಾಗಿ ಈ ಕೆಲಸ ನಮ್ಮ ಅಣ್ಣ ಮಾಡತಿದ್ದ, ನಡು ನಡುವ ನನಗೂ ಒಂದರೆಡು ಅವಕಾಶ ಸಿಗುತ್ತಿದ್ದವು. ಒಂದು ಕೈ ಚೀಲ ಅದರೊಳಗ ಪೀಟ್ಲಾಕ್ಕ ಒಂದು ಸಣ್ಣ ಡಬ್ಬಿ ತಗೊಂಡು, ಕಿಸೆಯೊಳಗ ದಾದಾ ಕೊಟ್ಟಿದ್ದು ರೊಕ್ಕ ಇಟ್ಕೊಂಡು ಹೋಗಿ, ಬಮ್ಮಣ್ಣಿಯವರ ಅಂಗಡಿ ಹೋದರ ಅಲ್ಲಿ ಕೂತವರು "ಯಾಕೊ ನೀ ಚಾ ಅಂಗಡಿಗಿ ಬಂದೀ?" ಅಂತ ನನಗ ಕೇಳು ಟೊಪ್ಪಿಗಿ-ಧೋತರ ಮಂದಿಗಿ, ಅಂಗಡಿ ಗಲ್ಲಾದಾಗ ಕೂತಿರೊ ಬಮ್ಮಣ್ಣಿ ಮಾಲಕ, "ಡಾಕ್ಟರೇ ಕಳಿಸಿರ್ತಾರ ನಾಷ್ಟಾ ತೊಂಗೊಂಡು ಬರ್ಲಿಕ್ಕಿ" ಅಂತ ಅಲ್ಲಿ ಕೂತವರಿಗಿ ಹೇಳವರು.

ಇಲ್ಲಿ ಒಂದು ವಿಷಯಾ ಭಾಳ ಸ್ಪಷ್ಟ ಹೇಳಬೇಕು ನಿಮಗ, ನಮ್ಮಂತಾ ಸಣ್ಣ ಸಣ್ಣ ಹುಡುಗರು ‘ಚಾ’ದ ಅಂಗಡಿ ಹೋಗುದು ಆವಾಗಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿತ್ತು. ಹಿರಿಯ ವಯಸ್ಸಿನ ಯಾರಿಗೆ ಆಗಲಿ ಇಂತಾಹ ಯಾವುದೇ ಅಪರಾಧಿಗಳಿಗೆ ಸ್ಥಳದಲ್ಲಿಯೇ ಶಿಕ್ಷೆ ವಿಧಿಸುವ ಅಧಿಕಾರವಿರುತ್ತಿತ್ತು. ಇಂತಾ ಅಪರಾಧ ಮಾಡುವ ಧೈರ್ಯ ಇದ್ದ ನನ್ನ ದೊಸ್ತರು ತಮ್ಮ ಪಾಲಿನ ಶಿಕ್ಷಾ, ಹೋಟೆಲನಿಂದ ಮನೆ ಮುಟ್ಟೂವರೆಗೂ ಅನುಭವಿಸಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಇಂತಾ ರಾಮ ರಾಜ್ಯದೊಳಗ ನನ್ನಂತೊನು ಬಜ಼ಾರನೊಳಗ ಇರುವಂತಾ, ಚಾ ಅಂಗಡಿಯೊಳಗ ಹೊಕ್ಕಿ ನಾಷ್ಟಾ ಮಾಡುದು ದುಸ್ಸಾಹಸದ ಮಾತಾಗಿತ್ತು.

ನಾನು ೯ ಇಲ್ಲಾ ೧೦ನೇತ್ತೆ ಬಂದಾಗ, ಖಾಸಾ ಖಾಸಾ ದೋಸ್ತ ಸಂಗಯ್ಯನ ಜೋಡಿ ಬಮ್ಮಣ್ಣಿವರ ‘ಚಾ’ದ ಅಂಗಡಿವೋಳಗ ಕಳ್ಳ ಬೆಕ್ಕಿನ ಹೆಜ್ಜಿ ಇಟ್ಟೆ. ಅಲ್ಲಿ ಖಾರಾ-ಬೆಳ್ಳುಳ್ಳಿದು ಚುರುಮುರಿ ಚೂಡಾ ರುಚಿ ನೋಡಿದೆ. ಕೆಂಪು ಹಳದಿ ಮಿಶ್ರಿತ ಚುರುಮುರಿ, ನಡುವ ನಡುವ ಹಣಿಕಿ ಹಾಕೊ ಕೆಂಪನ ಶೇಂಗಾ, ಮ್ಯಾಲ ದಪ್ಪ ದಾರದಂಗ ಸೇವು. ಮುಷ್ಟಿಯೊಳಗ ಸ್ವಲ್ಪ ತೊಗೊಂಡು, ಬಾಯಿಗಿ ಹಾಕೊಂಡ್ರೆ ಆ ...ಆಹಾಃ...ಏನು ರುಚಿ ಇರ್ತಿತ್ತು ಅಂತೀರಿ. ಇವತ್ತಿಗೂ ನನ್ನ ಪ್ರಕಾರ ಅಮೃತ ಅಂತಾ ಏನಾದ್ರು ಇದ್ದರ ಅದರ ರುಚಿನೂ ಆ ಚೂಡಾದ ರುಚಿನೇ ಇರ್ತದ. ಯಾವಾಗ, ಯಾವಾಗ .. ನಮ್ಮಿಬ್ಬರ ಹತ್ತಿರ ೭೦ ಪೈಸಾ ಒಟ್ಟ ಆಗತಿದ್ದೋ ಅವಾಗ, ಆವಾಗ... ಬಮ್ಮಣ್ಣಿವರ ಚಾ’ದ ಅಂಗಡಿಗೆ ನಮ್ಮ ಪ್ರವೇಶ ಆಗತ್ತಿತ್ತು. ಬೋನಸ್ ಏನರೆ ಸಿಕ್ಕಿದ್ದರ ಚೂಡಾದ ಮ್ಯಾಲ ಸ್ಪೆಷಲ್ ಚಾ ಆಗ್ತಿತ್ತು. ನಮ್ಮಿಬ್ಬರಿಗೂ ಒಳಗಿನ ಖೋಲಿಯೊಳಗ ಕೂಡಿಸಿ (ಯಾಕಂದ್ರ ಯಾರಿಗೂ ಕಾಣಿಸಬಾರ್ದಲ್ಲ), ಎಕ್ಸಟ್ರಾ ಶೇಂಗಾ, ಸೇವು, ಮ್ಯಾಲ ಸಣ್ಣಗ ಹೆಚ್ಚಿದ ಉಳ್ಳಾಗಡ್ಡಿ ಹಾಕಿ ಕೊಡ್ತಿದ್ದರು. ಈ ಚಹಾ ಚೂಡದ ಕಾರ್ಯಕ್ರಮ ಸುಮಾರು ಎರಡು ಮೂರು ವರ್ಷ ನಡೀತು.

ಮುಂದ ನಾನು ಓದಲಿಕ್ಕಿಂತ ಧಾರವಾಡಕ ಬಂದೆ. ಸಿಂದಗಿಗೆ ಸೂಟಿಗಿ ಹೋದಾಗ ಚೂಡಾದ ರುಚಿ ಆವಾಗಾವಾಗ ಸಿಗ್ತಿತ್ತು. ವರ್ಷ ಕಳೆದಂಗ ಕ್ರಮೇಣ ಅದು ಕಡಿಮಿ ಆಯಿತು. ಆದ್ರೂ ನಾನು, ಸಂಗಯ್ಯ ಚೂಡಾ ತಿನ್ನು ಪ್ರೋಗ್ರಾಮ್ ನೆನಸಕೊಳೋದು ತಪ್ಪಲ್ಲಿಲ್ಲ.

ಮತ್ತಿಷ್ಟು ವರ್ಷಗಳು ಕಳದು ಹೋದವು.ನಾವು ಬಸ್ ಸ್ಟಾಂಡ್ ಹತ್ತಿರ, ಕೋರ್ಟ್ ಹಿಂದಿನ ರೋಡನಾಗ ಇರೋ ನಮ್ಮ ಹೊಸಾ ಮನಿಗಿ ಬಂದೆವು. ನಾನು  ಬದುಕು ಹುಡುಕೊಂಡು ಬೆಂಗಳೂರಿಗೆ ಬಂದೆ..... ನೌಕರಿ,ಮದುವಿ, ಮಕ್ಕಳು ಸಂಸಾರ ಅನ್ನಕೊತ, ಬದುಕು ಬೆಳಕೊತ-ಬದಲಾಕೊತ ಹೋಯಿತು. ಈ ಕಡೆ ಊರಾಗಿನ ಬಮ್ಮಣ್ಣಿವರ ಅಂಗಡಿ ಬದಲಾಯಿತು, ಬಜಾರ ಬದಲಾಯಿತು, ಮಂದಿ ಬದಲಾದರು. ಹೋಟೆಲನಾಗ ಕೊಡು ನಾಷ್ಟನೂ ಬದಲಾಯಿತು. ಇಡ್ಲಿ, ದೋಸಾ, ಗೋಬಿ ಮಂಚೂರಿ, ಅದು ಎಂತಾದೋ ಫ್ರೈಡ್ ರೈಸ್ ಅಂತ ಎಲ್ಲಾ ಬಂದವು.

ಸರಿ ಸುಮಾರು ೨೦-೨೫ ವರ್ಷದ ಮ್ಯಾಲ ಪ್ರತಿ ವರ್ಷದಂಗ ನಾನು ದೀಪವಾಳಿಗಿ ಊರಿಗಿ ಹೋದಾಗ, ಒಂದ ಸರ್ತಿ ಲಕ್ಷ್ಮೀ ಪೂಜಾ ಮುಗದ ಮ್ಯಾಲ ನನ್ನ ಮಗ ಶೌರಿನ ಕರ್ಕೊಂಡು ಊರೊಳಿಗಿನ ಬಜಾರದಾಗಿನ ಅಂಗಡಿಗೋಳನ್ನ ತೋರಿಸಿಲ್ಲಿಕ್ಕಿ ಕರ್ಕೊಂಡು ಹೋದೆ. ಮಗನಿಗೆ ನನ್ನ ಬಾಲ್ಯ ತೋರಿಸೋ ಹಂಬಲದಿಂದ ನಾನು ಆಟ ಆಡಿದ ಜಾಗ, ಗೆಳೆಯಂದ್ರ ಮನೆಗೊಳು, ದೀಪಾವಳಿಗೆ ಬಣ್ಣ ಹಚ್ಚಿದ ಅಂಗಡಿಗೋಳು, ಪ್ರತಿ ಅಂಗಡಿ ಮುಂದ ಕಟ್ಟಿದ ಚೆಂಡು ಹೂವ, ತೆಂಗಿನ ಗರಿ, ಸಣ್ಣ ಸಣ್ಣ ಹುಡುಗುರು ಹೊಸ ಬಟ್ಟಿ ಮ್ಯಾಲ ಬಿಳಿ ಟೋಪಿಗೆ ಹಾಕೊಂಡು ಪಟಾಕಿ ಹೊಡಿಯೋದು, ಅವನಿಗೆ ತೋರೋಸ್ಕೊತ ನಮ್ಮ ಬಮ್ಮಣ್ಣಿವರ ಅಂಗಡಿ ಕಡೆ ಬಂದೆ. ಅಲ್ಲಿ ಅಂಗಡಿ ಮುಂದ ನಿಂತು, ಚೂಡಾದ ಬಗ್ಗೆ.... ನಾನು ಗೆಳೆಯನ ಜೊತೆ ಬಂದು ಕದ್ದು ಚೂಡಾ ತಿನ್ನ್ನೋದರ ಬಗ್ಗೆ ಹೇಳಿದೆ. ಅವನು ಎಷ್ಟರ ಮಟ್ಟಿಗೆ ಕೇಳಸ್ಕೊಂಡನೋ ಏನೋ ಅಂತ ಗೊತ್ತ ಸಹಿತ ಮಾಡ್ಕೊಳದೆ.. ನನ್ನ ಮಾತು ನಾನು ಹೇಳೇ ಹೇಳಿದೆ. ನನ್ನ ಮಾತಿನ ರಭಸ ಕಮ್ಮಿ ಆಗಿ ಸ್ವಲ್ಪ ಹೊತ್ತ ಆದ ಮೇಲೆ ಶೌರಿ “ ನೀ ಈಗ ಚೂಡಾ ತಿಂತಿಯಾ?” ಅಂದ. “ಇಷ್ಟು ರಾತ್ರಿ ಆದ ಮೇಲೆ ಹೋಟೆಲಗಿ ಹೋಗಿದ್ದು ಗೊತ್ತಾದರ ಅಮ್ಮಮ್ಮ ಬೈತಾಳೆ..” ಅಂತ ಬೇರೆ ಸೇರಸ್ದ.

ಚೂಡಾದ ಸಲುವಾಗಿ ಕಳ್ಳ ಬೆಕ್ಕ ಆಗಿರಿತ್ತದ್ದ ನನಗೆ, ಈಗಲೂ ಒಂದು ಕೈ ನೋಡೆ ಬಿಡೋಣ ಅಂತ ಅಂಗಡಿಯೋಳಗ ಅವನ ಕೈ ಹಿಡಕೊಂಡು ಹೊಕ್ಕೆ.

ಅಂಗಡಿ ಹುಡುಗುರು ಹೊಸಾ ಬಟ್ಟಿ ಹಾಕೊಂಡು ಲಕ್ಷ್ಮೀ ಪೂಜಾ ತಯಾರಿ ನಡಿಸಿದ್ರು. ನಾ ಅಂದುಕೊಂಡಗ ಅಂಗಡಿ ಗಲ್ಲಾದ ಮ್ಯಾಲ ಕೂತ ಹೊಸಾ ಸಣ್ಣ ಮಾಲೀಕ ನನಗ ಗುರುತ ಹಿಡಿಲ್ಲಿಲ್ಲ. ಆದ್ರೂ ದೇಶವಾರಿ ನಗು ನಕ್ಕು “ಏನ್ ಬೇಕ್ರಿ?” ಅಂತ ಅಂದ. ನಾನು “ಎರೆಡು ಚೂಡಾ ಪಾರ್ಸೆಲ್ ಮಾಡ್ರಿ” ಅಂದೆ. “ಸರ್ ಇವತ್ತ ಲಕ್ಷ್ಮೀ ಪೂಜಾ,ರೀ... ಹಿಂಗಾಗಿ ನಾಷ್ಟಾ ಏನೂ ಇಲ್ಲರಿ...” ಅಂದ. ಅದಕ್ಕ ನಾನು ಅವನಿಗೆ ನನ್ನ ಚೂಡಾದ ದಿನಗೋಳ ಬಗ್ಗೆ ಮಾತ ಹೇಳಿ, ಇರ್ಲಿ ಬಿಡ್ರಿ ಮತ್ತೊಂದು ಸರ್ತಿ ಬರ್ತಿನ್ರಿ ಅಂದೆ. ಅವನಿಗೆ ಏನು ಅನ್ಸತ್ತೋ ಏನೋ, ನನ್ನ ಮಗ್ಗಲಿಗ ನಿಂತ ಶೌರಿನೊಮ್ಮೆ ಮತ್ತ ನನ್ನೊಮ್ಮೆ ನೋಡಿ “ಪಾರ್ಸೆಲ್ ಮಾಡ್ಸಿತಿನಿ ನಿಂದಿರ್ರೀ” ಅಂದ. ಒಳಗ ಎತ್ತಿ ಇಟ್ಟಿದ್ದ ಬುಟ್ಟಿಯೊಳಗಿನ ಚೂಡಾ ತೆಗೆಸಿ ಪಾರ್ಸೆಲ್ ಮಾಡಿ ಕೊಟ್ಟು “ಆ ಟೈಮನಾಗ ಸಂಗಪ್ಪ ಅನ್ನೋವ ಚೂಡಾ ಮಾಡ್ತಿದ್ದರಿ...ಅವ ಸತ್ತು ೧೦-೧೫ ವರ್ಷ ಆಯಿತರಿ...ಆಮೇಲೆ ಅವನಂಗ ಚೂಡಾ ಮಾಡೋರೆ ಸಿಕ್ಕಿಲ್ಲರಿ ... ಇವತ್ತಿಗೂ ನಿಮ್ಮಂಗ ಮಂದಿ ಆವಾಗಿನ ಚೂಡಾ ನೆನೆಸತಾರಿ” ಅಂತ ಅಂದ.

ನಾನು ಎಂದೂ ಕಂಡಿರದ ಸಂಗಪ್ಪನ ಬಗ್ಗೆ ನನಗೆ ಗೌರವ ಭಾವನೆ ಮೂಡಿತು. ತನಗೆ ಗೊತ್ತಿರೋ ಕಸುಬುದಾರಿಕೆಯಿಂದ ಇನ್ನೂ ಮಂದಿ ನೆನಪಿನೋಳಗ ಉಳಿದ್ದಿದ್ದು ನೋಡಿ ಅವನ ಬದುಕು ಸಾರ್ಥ್ಯಕ್ಯ ಆಯಿತು ಅಂತ ಅನ್ನಸ್ತು.

ಕಟ್ಟಿಸಿಕೊಂಡಿರೋ ಚೂಡಾ ತೊಗೊಂಡು ಮನಿಗೆ ಬಂದೆವು. ಶೌರಿ ಮೊದ್ಲೇ ಹೇಳಿದಂಗ, ರಾತ್ರಿ ಹೋಟೆಲ ಚೂಡಾ ತಂದ್ದಿದದ್ದಕ್ಕ ನಮ್ಮಮ್ಮನ ಹತ್ರ ಬೈಸಿಕೊಂಡಿದ್ದು ಆಯಿತು.

ಶೌರಿ, ಪಲ್ಲವಿ ಚೂಡಾ ತಿಂದರು, "ಮಸ್ತ ಅವ" ಅಂದ್ರು. ನಾನೂ ತಿಂದೆ, ಮಜಾ ಬರ್ಲಿಲ್ಲ..ಆದ್ರ ಅವರಿಗೆ ಹೇಳಿಲ್ಲ..

-------------------------------------------------------------

ಉಪ ಸಂಹಾರ


ಸಿಂದಗಿಯಿಂದ ವಾಪಸ್ಸು ಬಂದು ತಿಂಗಳಾದ ಮೇಲೆ ಮನ್ಯಾಗ ಒಂದು ರವಿವಾರ ಮಧ್ಯಾನ್ಹ, ನಾನು ಶೌರಿ ಟಿ ವಿ ಯೊಳಗ ಡಿಸ್ಕವರಿ ಚಾನೆಲ್ ನೋಡಕೊತ ಕೂತಿದ್ದಿವಿ. ಇಟಲಿ ಮೂಲದ ಆಮೆರಿಕನ್ ಒಬ್ಬನ ಬಗ್ಗೆ ಡಾಕ್ಯುಮೆಂಟರಿ ಅದು. ತೀರಿ ಹೋಗಿರೋ ತನ್ನ ಅಜ್ಜಿನೋ ಇಲ್ಲಾ ಮುತ್ತಜ್ಜಿನೋ ಬರಿದಿಟ್ಟಿರೋ ಡೈರಿ ಪ್ರಕಾರ ಅವಳ ಹುಟ್ಟಿದೂರಿನಲ್ಲಿನ ಹೋಟೆಲ್ ಒಂದರ ಪಿಜ್ಜಾದ ರುಚಿ ಹುಡಕೊಂಡು, ಅವನು ಹೋಗಿರ್ತಾನೆ.

ಅವನು ಹೋಟೆಲ್ ಹುಡ್ಕೊಂಡು ಹೋಗೋ ದಾರಿ ಬಗ್ಗೆ, ಆ ಹೋಟೆಲ್ ಸಿಕ್ಕ ಮೇಲೆ, ಈಗ ಅದೇ ರೀತಿ ಪಿಜ್ಜಾ ಮಾಡೋರ ಬಗ್ಗೆ, ಆ ಮನೆಯವರೆಲ್ಲಾ ಪಿತ್ರಾರ್ಜಿತ ಆಸ್ತಿಯಾಗಿ ಬಂದ ಆ ರೆಸಿಪಿ ಬಗೆಗಿನ ವ್ಯಕ್ತ ಪಡಿಸೋ ಹೆಮ್ಮೆ ಬಗ್ಗೆ,  ಎಲ್ಲಾ ಸಣ್ಣ ಸಣ್ಣ ವಿಷಯಗಳನ್ನು ವಿವರವಾಗಿ, ಎಲ್ಲವನ್ನು ಅದ್ಭುತವಾಗಿ ತೋರಿಸಿದರು.

ಪ್ರೋಗ್ರಾಮ್ ಮುಗಿದ ಮ್ಯಾಲ ಶೌರಿ “ನಾವೂ ಅಲ್ಲಿ ಹೋಗೋಣಾ ಅಪ್ಪಾ? ಅಲ್ಲಿ ಪಿಜ್ಜಾ ಮಸ್ತ ಇರತದ” ಅಂದ. ನಾನು ಹೂಂ ಹೋಗೋಣ ಅಂದೆ.

ಮಂಗಳವಾರ, ಜನವರಿ 1, 2013

ಬೀಡಿ ಸೇದು ಮುದುಕಿ


ಬೀಡಿ ಸೇದು ಮುದುಕಿ

 

ಗುರುರಾಜ ಕುಲಕರ್ಣಿ (ನಾಡಗೌಡ)


ನಾನು ಸಿಂದಿಗಿಯೊಳಗ ಸಾಲಿ ಕಲಿ ಮುಂದಾಗ, ಎರಡ್ನೆತ್ತೆ ತನಾ ಬಜ಼ಾರನಾಗ ಇರು, ಹೆಣ್ಣಮಕ್ಕಳ ಸಾಲಿಗಿ ಹೋಗ್ತತ್ತಿದ್ದೆ. ಮೂರನೆತ್ತೆಕ್ಕ ಬಂದ ಮ್ಯಾಲ್ ಊರ ಹೊರಗಿದ್ದ ಗಂಡ ಹುಡುಗರ ಸಾಲಿಗಿ ಹೆಸರ ಹಚ್ಚಿದ್ದರು. ನನಗ ಅಷ್ಟ ದೂರ ನಡ್ಕೊತ ಹೋಗುದು ಆಗ್ತದೊ ಇಲ್ಲ ಅಂತ,ಅಮ್ಮಮೈಬುಬಗ ಸಾಯಿಕಲ್ ಮ್ಯಾಲ್ ಕರ್ಕೋಂಡು ಹೋಗಿ ಕರ್ಕೋಂಡ ಬರೋ ಕೆಲಸ ಕೊಟ್ಟಿದ್ದಳು. ನನಗೂ ಬಾಕಿ ಎಲ್ಲಾ ಹುಡುಗ್ರಂಗ ನಡಕೊತ, ಊರಾಗಿನ ಬ್ಯಾರೆ ಬ್ಯಾರೆ ರಸ್ತಾ-ಸಂದಿ ತಿರುಗೊಕೊತ ಸಾಲಿಗಿ ಹೋಗಿ ಬರಬೇಕು ಅಂತ ಭಾಳ ಆಸೆ ಆಗ್ತಿತ್ತು. ಆದ್ರ ದಾದಾನ ಹೆದ್ರಿಕಿಗಿ ಮೈಬುಬುನ ಜೊಡಿ ಸಾಯಿಕಲ್ಲ ಮ್ಯಾಲ್ ಸುಮ್ಮನ ಹೋಗ್ತಿದ್ದೆ. ಸಾಲಿಗಿ ಹೋದ ಸುರು ಸುರುವಿಗಿ ಗೆಳೆಯಂದ್ರು ಯಾರು ಇರ್ಲಾದೆ ಬ್ಯಾಸರ ಆಗ್ತಿತ್ತು. ಆದ್ರ ಮುಂದ ನಾಕನೇತ್ತೆಕ್ಕ ಬರುದರಾಗ, ಒಂದ ನಾಲ್ಕಾರು ಗೆಳೆಯಂದ್ರು ಸಿಕ್ಕರು.


ಮುಂದ ಐದನೇತ್ತಕ್ಕ ಬಂದಾಗ, ತಾನೇ ನಡಕೊತ ಸಾಲಿಗಿ ಹೋಗಿ ಬರ್ತಾನ ಬಿಡು ಅಂತ ನಮ್ಮ ಅಮ್ಮ ಮೈಬುಬುಗ ನಿನಗ ದವಾಖಾನಿ ಕೆಲ್ಸಾನೆ ಸಾಕು ಅಂತ ಹೇಳಿದ್ಳು. ಹಿಂಗಾಗಿ ನಾನೂ ಇದ್ದ ಗೆಳೆಯಂದ್ರ ಜೋಡಿ ನಡಕೊತ ಸಾಲಿಗಿ ಹೋಗಿ ಬರೋದು ಸುರು ಮಾಡಿದೆ. ಆವಾಗಿಂದ ಗೆಳೆಯಂದ್ರು ಭಾಳ ಮಂದಿ ಆದ್ರು... ಹಂಗೇ ಸಿಂದಗಿಯೊಳಗಿನ ಸಂದಿಗೊಂದಿಗೋಳು ಗೊತ್ತಾಗ್ಲಿಕತ್ತುವು. ಭೀಮಾಶಂಕರ ಮಠದ ಮುಂದ ಹಾದು, ಒಳಗಿನ ಸಂದ್ಯಾಗಿಂದ ಬಂದ್ರ ಸೀದಾ ಬಜ಼ಾರನಾಗಿನ ಉಪ್ಪಿನವರ ಅಂಗಡಿ ಮುಂದೆ ಬರ್ತಿವಿ ಅನ್ನುವಂತಾ ಜ್ಞಾನ ಸಿಗಿಲ್ಲಿಕ್ಕಿ ಶುರು ಆಯಿತು.

ನಮ್ಮ ಮನಿ ಆವಾಗ ನೀಲಗಂಗಮ್ಮನ ಗುಡಿ ಮುಂದ ಇತ್ತು. ಮನಿ ಸುತ್ತಮುತ್ತಲು ಗೆಳೆಯಂದ್ರು ಇದ್ದರು. ಅವರೂ ಗಂಡ ಸಾಲಿಗಿ ಬರ್ತಿದ್ರು. ಮುಂಜಾನೆ ಸಾಲಿಗಿ ಹೋಗು ಮುಂದಾಗ, ನೀಲಗಂಗಮ್ಮನ ಗುಡಿಗಿ ಎಲ್ಲಾರಂಗ ಹೊರಗಿಂದ ನಮಸ್ಕಾರ ಮಾಡಿ..ಹಂಗೆ ಊರಾನ ಮಠದ ಒಳಗಿಂದ ಹಾಯಿದು, ಬಿಂದುನ ಚಾ ಅಂಗಡಿ (ಅದಕ ಜೈ ಹನುಮಾನ್ ಟೀ ಕ್ಲಬ್ ಅಂತ ಬೋರ್ಡ್ ಇತ್ತು) ಮುಂದ ಕೂತ ಮಂದಿನ ನೋಡ್ಕೊತ್, ಮಸೀದಿ ಮುಂದ ಇರು ಪವಾರ್‌ನ ಬೀಡಿ ಅಂಗಡಿಯೊಳಗಿನ ಕನ್ನಡಿಯೊಳಗ ಹಣಿಕಿ ಹಾಕೊತ, ಸಿಂಡಿಕೇಟ ಬ್ಯಾಂಕ ಮುಂದ ನಿಂತಿರತ್ತಿದ್ದ ರಾಜದೂತ ಮೋಟರ ಸೈಕಲ್ ಸೀಟ ಮ್ಯಾಲ್ ಕೈ ಆಡಿಸಿ, ಮುಂದ ಇರೋ ಕಟ್ಟಿಗಿ ಅಡ್ಡೆ, ತಾರಾಪುರದವರ ಅಡತಿ ಅಂಗಡಿ ಮುಂದ ನಡಕೊಂಡು, ಕುಂಟ ಹಣಮಪ್ಪನ ಗುಡಿ ಮುಂದ ಕೂತಿರೊ ಭಿಕ್ಷಾದಂವನ ಮುಂದ ಬಿದ್ದಿರೊ ಚಿಲ್ಲರ ರೊಕ್ಕ್ ನೋಡ್ಕೊತ, ಶೇಟಜಿ ಪೆಟ್ರೊಲ್ ಬಂಕ ಮುಂದ ನಿಂದ್ರಿಸ್ಸಿದ್ದ ದೆವ್ವಿನಂತಾ ಟ್ರಕ್ ಒಳಗ ಕಾಜಿಗಿ ಅಂಟಿಸಿರು ಲಕ್ಷ್ಮೀ, ಗಣಪತಿ, ಶಿವನ ಸ್ಟಿಕರ್ಸ್ ನೋಡಿ, ಬಸ್ ಸ್ಟ್ಯಾಂಡಿಗಿ ಬರು ಬಸಗೋಳ ನಡುವ ಹಾರಕೊತ, ಅದರ ಎದ್ರುಗಿದ್ದ ನಮ್ಮ ಕನ್ನಡ ಸಾಲಿಗಿ ಹೋಗ್ತಿದ್ವಿ.

ಸಾಲಿಗಿ ಹೋಗು ಮುಂದಾಗ ನಾವು ಹುಡುಗರೆಲ್ಲಾ ಗುಂಪು ಗುಂಪಾಗಿ ಹೊಗ್ತಿದ್ದಿವ್ವಿ. ಹೋಗು ಮುಂದಾಗ, ನೀಲಗಂಗಮ್ಮನ ಜಾತ್ರಿಗಿ ಈ ಸರ್ತಿ ಏನೇನು ತೊಗೊ ಬೇಕು, ಮಣ್ಣೆತ್ತಿನ ಅಮ್ಯಾಸಿಗಿ ಮಣ್ಣೆತ್ತ ತೋಗೊಳ್ಳಿಕ್ಕಿ ಯಾವ ಕುಂಬಾರ ಮನಿಗಿ ಹೋಗಬೇಕು, ಬೀದಿ ಬಾಂವಿ ಹತ್ತಿರ ಇರು ಹೆಂಣ್ಣ ನಾಯಿಗಿ ಮರಿ ಆಗಿದ್ದು, ಬಡಿಗೇರ ಶ್ಯಾಮ್‍ ಮಾಡಿಕೊಟ್ಟ ಬಗರಿ ಎಷ್ಟು ಜೋರ್ ತಿರಗತ್ದದ, ಯಾರ್ಯಾರು ದೊಸ್ತಗೋಳು ನೂರಕ್ಕಿಂತಾ ಹೆಚ್ಚಿಗಿ ಗೊಲಿ-ಗುಂಡ ಇಟ್ಟಾರ, ಚೌಡಮ್ಮನ ಜಾತ್ರ್ಯಾಗ "ಅಗ್ಗಿ" ಹ್ಯಾಂಗ ಹಾರತಾರ, ಗಣೇಶ ಚೌತಿಗಿ ಲೇಜ಼ಿಮ ಆಡ್ಲಿಕ್ಕಿ ಸೊಲಾಪುರದಿಂದ ಬರ್ತಾರ ಅಂತ, ಇಂತಾ ನೂರಾರು-ಸಾವಿರಾರು ಸುದ್ದಿ ಮಾತಾಡಕೋತ ಹೊಂಟ್ರ ಸಾಲಿ ಬಂದ್ದದ್ದೇ ಗೊತ್ತಾಗ್ತಿರಲ್ಲಿಲ್ಲ.

ಹೀಂಗೆ ಒಂದ ದಿವ್ಸ ಮಾತಡ್ಕೊತ ಸಾಲಿಗಿ ಹೋಗು ಮುಂದಾಗ, ಊರಾನ ಮಠದ ಹತ್ತರ ಇರು ಹುಡುಗೊಬ್ಬ ಒಂದು ಆಶ್ಚರ್ಯಕರವಾದ ಸುದ್ದಿ ಹೇಳಿದ. ನಾವು ಯಾರು ಅಂತಾದ್ದು ನೋಡಿರಲ್ಲಿಲ್ಲ ಇಲ್ಲಾ ಕೇಳಿರಲ್ಲಿಲ್ಲ. ನನಗಂತೂ ನಂಬ್ಲಿಕ್ಕೆ ಆಗ್ಲಿಲ್ಲ...ಹೇ ಸುಳ್ಳ ಹೇಳ್ತಾನ ಇಂವ್ ಅಂತ ನಾ ಅಂದೆ..ಆದ್ರ ಅದನ್ನು ನೋಡಿದ್ದ ಇನ್ನೊಂದಿಬ್ರು ದೋಸ್ತರು, “ ಆ ಹುಡುಗ ಹೇಳೋದು ಖರೆ ಮತ್ತ ಅದನ್ನ ನಾವೂ ನೋಡಿವಿ” ಅಂತ ಆಣಿ ಮಾಡಿ ಹೇಳಿದ್ರು.. ಅದು ಸುದ್ದಿ ಏನು ಅಂದ್ರ ಊರಾನ ಮಠದ ಹತ್ರ ಇರು ನಮ್ಮ ದೋಸ್ತನ ಮನಿ ಮುಂದಿನ, ಮನ್ಯಾಗ ಇರು ಒಂದು ಮುದುಕಿ ಬೀಡಿ ಸೇದತಾಳ ಅಂತ ಅನ್ನು ವಿಷಯ. ನನಗೋ ಇದು ಪರಮಾಶ್ಚರ್ಯದ ಸುದ್ದಿ.

ನಾನು ಆಶ್ಚರ್ಯ ಪಡೋದು, ಸುದ್ದಿ ಹೇಳೋ ಹುಡುಗನಿಗಿ ಹುರುಪ ಕೊಟ್ಟತು. ಮುದುಕಿ ಬೀಡಿ ಹ್ಯಾಂಗ ಸೇದತಾಳ ಅನ್ನೋದರ ಬಗ್ಗೆ ಅವನ ವರ್ಣನಾ ಇನ್ನು ಹೆಚ್ಚಾಯಿತು. ಅದಕ್ಕ ತಕ್ಕಂತೆ ನನ್ನ ಕುತೂಹಲ ಬೆಳ್ಕೊಂಡು ಹೋಯಿತು. ಬೀಡಿ ಸೇದು ಮುದುಕಿನ್ನ ನೋಡ್ಲೇ ಬೇಕು ಅನ್ನು ತಹ ತಹಿಕಿ ಶುರು ಅಯಿತು. ಬೀಡಿ-ಸಿಗರೇಟ ಸೇದುದು ಬರೆ ಗಂಡಸರ ಕೆಲಸ ಅಂತ ತಿಳ್ಕೊಂಡ್ಡಿದ್ದ ನಮ್ಮಂತಹಾ ಹುಡುಗರಿಗಿ ಇದು ಭಾಳೇ ಆಶ್ಚರ್ಯದ ವಿಷಯವಾಗಿತ್ತು.

ಮುದುಕಿ ಬೀಡಿ ಸೇದುದು ನೋಡೆ ಬಿಡುಣು ಅಂತ, ಮಧ್ಯಾನ್ಹದ ಸಾಲಿ ಬಿಟ್ಟು ಓಡಿ ಊರಾನ ಮಠದ ಕಡೆ ಹೋದೆವು. ಆ ಮುದುಕಿ ತನ್ನ ಗುಡಿಸಿಲ ಹೊರಗ ಕೂತಿದ್ದಳು. ಕತ್ತಲಿ ಆಗುತನ ನಾವಿಬ್ಬರು ಅಲ್ಲೇ ಠಳಾಯಿಸಿದ್ವಿ ಆವಾಗವಾಗ ತನ್ನ ಸಂಚಿ ತಗುದು ತಂಬಾಕ ಹಾಕೊಂಡ್ಲೆ ಹೊರತು ಆಕಿ ಏನೂ ಬೀಡಿ ಹಚ್ಚಲ್ಲಿಲ್ಲ. ತಡಾ ಮಾಡಿ ಮನಿಗಿ ಹೊದ್ರ ಏಟು ಬಿಳ್ತಾವ ಅಂತ ನಾ ಮನಿಗಿ ಹೋದೆ. ಮುಂದ ಈ ವಿಷಯಾ ಮರತೂ ಹೋದೆ. ಮುದುಕಿ ಬೀಡಿ ಸೇದುದು ನಾ ನೋಡಲಿಲ್ಲ.

--------------------------------------------------------

ಉಪಸಂಹಾರ


ಮುಂದ ಸರಿ ಸುಮಾರು ಮುವತ್ತು ವರ್ಷದ ಮ್ಯಾಲೆ, ಟೊರೊಂಟೊದ ಆಫೀಸಿನಾಗ, ಒಂದ ಮುಂಜಾನೆಯಿಂದ ಕೆಲಸ ಮಾಡ್ಕೊತ ಕೂತವನಿಗಿ, ಸೊಂಟ ಮತ್ತ ಕುತ್ತಿಗಿ ಹಿಡಿದಂಗ ಆಗಿತ್ತು. ಅದಕ ಸಂಜಿ ಎಳಿ ಬಿಸಿಲನಾಗ ಆಫೀಸಿನ ಮಗ್ಗಲ್ಲಕೇ ಇರು ಬಗೀಚನಾಗ ಕಾಲ ಆಡಿಸ್ಕೊತ ತಿರುಗಾಡತಿದ್ದೆ.

ಅಲ್ಲಿ ಇರೋ ಸಣ್ಣ ಕೆರಿಯೊಳಗಿನ ತಿಳಿ ನೀರ, ನೀಲಿ ಮುಗಿಲನಾಗ ಹಾರತ್ತಿದ ಬಿಳಿ ಮೋಡ ನೋಡ್ಕೋತ, ಆ ಕಡಿ ಈ ಕಡಿ ಗೊಣು ತಿರುಗಿಸದವನಿಗೆ, ಎದುರಿಗಿನ ಬೆಂಚ ಮ್ಯಾಲ ಕೂತು ಸಿಗರೇಟು ಸೇದತ್ತಿದ್ದ ಬಿಳಿ ಮುದುಕಿನ ನೋಡಿದಾಗ....ನಿಮಗ ಮ್ಯಾಲ ಹೇಳಿದ್ದಲ್ಲಾ ಮನಸ್ಸಿನಾಗ ಸಿನೆಮಾದಂಗ ಓಡಿದ್ದು ಸುಳ್ಳಲ್ಲ.

ಭಾನುವಾರ, ಡಿಸೆಂಬರ್ 23, 2012

ಸಿಂದಗಿ ಬ್ಯಾಸಗಿ ಅಂದ್ರ...

ಸಿಂದಗಿ ಬ್ಯಾಸಗಿ ಅಂದ್ರ..

 


-ಗುರುರಾಜ ಕುಲಕರ್ಣಿ(ನಾಡಗೌಡ) 



ಸಿಂದಗಿ ಬ್ಯಾಸಗಿ ಅಂದ್ರ,
ಮುಂಜಾನೇನೆ ಶುರು ಆಗೊ ರಣ ರಣ ಬಿಸಿಲು,
ರಾತ್ರಿ ಆದ್ರೂನು ಸುಡು ಸುಡು ನೆಲ,
ಟೇಬಲ್ ಮ್ಯಾಲ್ ಸುಮ್ಮನೆ ಕೂತಿರೊ ಫ಼್ಯಾನು,
ಅಲ್ಲಾಡದೆ ನಿಂತಿರೊ ಗಿಡದ ಟೊಂಗೆ,
ಬೆವರಿನೊಳಗ ನೆಂದಿರೊ ಕರಿ, ಬಿಳಿ ಟೊಪಿಗೆಗಳು;

ಸಿಂದಗಿ ಬ್ಯಾಸಗಿ ಅಂದ್ರ,
ಮಣ್ಣೂರ ಸರ್, ವಾಡೆ ಸರ್ ಪುಸ್ತಕದ ಅಂಗಡಿ ಮುಂದ ನಿಂತಿರೊ ಹುಡುಗ್ರು,
ಪರೀಕ್ಷಾ ತಯಾರಿ, ಕ್ಲಿಪ್ ಬೋರ್ಡ, ಹೊಸಾ ಪೆನ್, ಕೆಂಪ ಮಸಿ ಬಾಟಲಿ,
ನಟರಾಜ್ ಪೆನ್ಸಿಲ್, ಲೇಖಕ್ ನೋಟ ಬುಕ್, ಬಿಳಿ ಹಾಳಿ ಖರೀದಿ;

ಸಿಂದಗಿ ಬ್ಯಾಸಗಿ ಅಂದ್ರ, 
ಜೋಗೂರ ಬಸುನ ಹೊಲದ್ದು ಮಾವಿನ ಹಣ್ಣ್,
ಸಿದಗೊಂಡಪ್ಪನವರ್ ತ್ವಾಟದಾಗಿನ ದ್ರಾಕ್ಷಿ,
ಬಜ಼ಾರದಾಗ ಕೂತು, ಬುಡ್ಡಿ-ಮಾ ಮಾರೊ "ಕಾಶಿ" ಬಾರಿಹಣ್ಣ್,
ಗಾರೆಗಾರ್- ಲಾಲ್‍ವಾಲದೊನ್ ಒತ್ತು ಬಂಡಿ;

ಸಿಂದಗಿ ಬ್ಯಾಸಗಿ ಅಂದ್ರ,
 ಅಂಗಡಿಗೋಳ ಮುಂದ ’ಚಾ’ದ ಜೋಡಿ ಬೀಡಿ ಸೇದೊರು,
ಹಣಮಂತ್ ದೇವರ್ ಗುಡಿ ಕಟ್ಟಿಗಿ ಮಲ್ಕೊಂಡ ಮುದುಕ,
ಚಡ್ಡಿ ಹಾಕ್ಕೊಳಾರದೆ ಆಡು ಸಣ್ಣ್ ಸಣ್ಣ್ ಚಿಕ್ಕೊಳು,
ಮೆಲಕಾಡಸ್ಕೊತ್ ಕೂತ ದನಗೊಳು,
ಮನಿ ಮಗ್ಗಲಾಗಿನ್ ಬೇವಿನ ಗಿಡದ ನೆರಳ;

ಸಿಂದಗಿ ಬ್ಯಾಸಗಿ ಅಂದ್ರ,
 ಎಂಟೆನೆ ಸರ್ತಿ "ಮಯೂರ" ಸಿನೆಮಾ ನೋಡ್ಲಿಕ್ಕಿ ಬಂದೊರು,
ಸೆಖಿ ತಡಿಲಾರ್ದೆ ಶರ್ಟ್ ಬಿಚ್ಚಕೊಂಡು ಕೂತು, ಸೀಟಿ ಹೊಡಿಯೊ ಹುಡುಗ್ರು,
ಕಠಾರಿ ವೀರ, ಬಾಲನಾಗಮ್ಮ, ತಾಯಿಯ ಮಡಿಲ್ಲಲ್ಲಿ ಪೋಸ್ಟರಗಳು,
ಇಂಟರವಲ್ಲ್ನಾಗ್, ನಾಸಿ ಉಮೇಶ ಮಾರೊ ಪೆಪ್ಪರಮಿಂಟು;

ಸಿಂದಗಿ ಬ್ಯಾಸಗಿ ಅಂದ್ರ,
ಜಂಬಗಿ ಸರ್ ಹೇಳಿ ಕೊಡೊ ಭಾಷಾಂತರ ಪಾಠಮಾಲೆ ಒಂದು, ಎರಡು, ಮೂರು,
ಕಪಾಟನಾಗಿರೊ ಹಳೇ ಕಸ್ತೂರಿ, ಕರ್ಮವೀರ
ಶೆಲ್ಫ್ನಾಗಿರೊ ಬೇಂದ್ರೆ, ಕಾರಂತ, ಭೈರಪ್ಪ, ಡಿವಿಜಿಯವರ ಪುಸ್ತಕಗೊಳು,
ತೊಡಿಮ್ಯಾಲಿರೊ "ಬೊಂಬೆಮನೆ", ಕೈಯೊಳಗಿರೊ "ಚಂದಮಾಮ",
"ಸುಧಾ"ದಾಗಿನ ಫ್ಯಾಂಟಮ್, "ಕರ್ಮವೀರ"ನಾಗಿನ ವಿಕ್ರಮ;

ಸಿಂದಗಿ ಬ್ಯಾಸಗಿ ಅಂದ್ರ, 
 ಅಮ್ಮ ಮಾಡಿದ ಉಳ್ಳಾಗಡ್ಡಿ, ಟೊಮೇಟೊ ಹುಳಿ,
ಗೊಲಿಗುಂಡ ಆಡಿದ್ದಕ್ಕ ದಾದಾ ಕೊಟ್ಟ ಏಟು,
ಅಕ್ಕ-ಅಣ್ಣನ ಜೋಡಿ ಆಡಿದ್ದ ಕೆರಂಬೊರ್ಡು,
ಧಾರವಾಡ ಆಕಾಶವಾಣಿಯೊಳಗ ಬರೊ ಗಿಳಿವಿಂಡು;

ಸಿಂದಗಿ ಬ್ಯಾಸಗಿ ಅಂದ್ರ,
ಮುಂಜಾನೆ ಜಕ್ಕಪ್ಪಯ್ಯನೊರ ತ್ವಾಟದ ಬಾವಿ ಈಜು,
ಸಂತಿಯೊಳಗ ಮೈಬು ತಂದ ತಾಜ಼ಾ ಬೆಣ್ಣಿ,
ಬಿಸಿ ಬಿಸಿ ಭಕ್ಕರಿ ಪಲ್ಯ ಊಟ-ಮಧ್ಯಾಹ್ನದ ನಿದ್ದಿ,
ಸಂಜಿಮುಂದ ಆಡೊ, ಬುಗುರಿ, ಚಿಣದಾಂಡ, ಗೊಲಿಗುಂಡ,
ರಾತ್ರಿ ಮುಗಿಲಾನಾಗ ಕಾಣೊ ಬೆಳ್ಳಗಿನ ಚಂದ್ರಾಮ;

ಸಿಂದಗಿ ಬ್ಯಾಸಗಿ ಅಂದ್ರ,
ಅಮ್ಮ ಮಾಡೊ ನಿಂಬೆ ಹಣ್ಣಿನ ಶರಭತ್,
ದಾದಾ ಹೇಳೊ ಹಿಪ್ಪರಗಿ ಹಳೇ ಸುದ್ದಿಗಳು, ಕಥಿಗೊಳು,
ಅಣ್ಣನ ಜೋಡಿ ಆಡೊ ಬಾಡಿಗಿ ಸೈಕಲ ಆಟ,
ಗಡಿಗಿಯೊಳಗ ಇರೊ ತಣ್ಣಗಿನ ನೀರು;

ಸಿಂದಗಿ ಬ್ಯಾಸಗಿ ಅಂದ್ರ,
ಹೋಳಿಹುಣ್ಣಿವಿಗಿ ಮಾಡೊ ಕುಳ್ಳ ಕಟ್ಟಿಗಿ ಕಳ್ಳತನ,
ಮರುದಿನ ಲಬೊ ಲಬೊ ಹೊಯ್ಕೊತ ಬಣ್ಣ ಹಾಕೊ ಗೆಳೆಯಂದ್ರು,
ಬಡಿಗೇರ ಭಗವಂತ, ಪತ್ತಾರ ಉಮೇಶ, ನಾಗೂರ ಅನಿಲ್,
ಗೋಲಾ ರವಿ, ಜೋಶಿ ರಾಮಾಚಾರಿ, ಗುಣಾರಿ ಶಿವು,
ಕುಲ್ಕರ್ಣಿ ಸಂಜೀವ, ಪಾಟೀಲ ವಿಜು,ಸಂಗಯ್ಯ, ಮನಗೂಳಿ ಅಶೋಕ

ಶಬ್ದಾರ್ಥ

ಬುಡ್ಡಿ ಮಾ - ಸಂತಿಯೊಳಗ ತರಕಾರಿ-ಹಣ್ಣು ಮಾರುತಿದ್ದ ಮುಸಲ್ಮಾನರ
ಮುದುಕಿ, ಮಕ್ಕಳಿಗೆಲ್ಲಾ ಬುಡ್ಡಿ-ಮಾ ಎಂದೇ ಪರಿಚಿತ

ಗಾರೆಗಾರ್ವಾಲ್ - ಐಸ್ ಮಾರೊನಿಗೆ ಮಕ್ಕಳು ಕೂಗೊ ಹೆಸರು

ಚಿಕ್ಕೊಳು - ಚಿಕ್ಕ ಮಕ್ಕಳು

ಕುಳ್ಳು - ಬೆರಣಿ  


ವಿನಯ ಕೃಷ್ಣಸ್ವಾಮಿ  ಫ಼ೇಸ್ ಬುಕ್ ನಾಗ "ಗುರುವಾಯುರನ ಕೆರೆ" ಬಗ್ಗೆ ಓದಿ ಅಪ್‍ಡೇಟ್ ಮಾಡಿದ್ದು ನೋಡಿ, ನನ್ನೂರ ಸಿಂದಗಿ ನೆನಪಾಯಿತು.

ಮಲೆನಾಡಿನವರಿಗಿ ಬರಿಲ್ಲಿಕ್ಕಿ ಹಸಿರ ಹುಲ್ಲ, ಗುಡ್ಡ ಮತ್ತ ನೀರು ಅವ, ಕಾಡು ಅದ...ಆದ್ರ ಬಯಲ ಸೀಮಿಯೊಳಗ ಹುಟ್ಟಿ ಬೆಳೆದ ನನ್ನಂತಹವರಿಗಿ...ಬ್ಯಾಸಗಿ ಬಿಸಿಲ ಬಿಟ್ಟು ಬರಿಲಿಕ್ಕಿ ಏನೂ ಇಲ್ಲಾ...

ಏನೂ ಇಲ್ಲಾ ಅಂದ್ರೂನು...ನನ್ನೂರಾಗ ನನ್ನ ಬಾಲ್ಯ ಅದ..ಗೆಳೆಯಿಂದ್ರು ಇದ್ದಾರ...ಗೆಳೆತನ ಅದ..ಮಜ಼ಾ ಅದ...ಅದನ್ನೇ ಬರೆದೆ..ಕವನ ಆಯಿತು...

ಹುಣಸಿ ಗಿಡಗೊಳ ಸಾಲು



ಹುಣಸಿ ಗಿಡಗೊಳ ಸಾಲು



- ಗುರುರಾಜ ಕುಲಕರ್ಣಿ (ನಾಡಗೌಡ)



ಎಲ್ಲಿ ಹೋದ್ವು ಆ ಹುಣಸಿ ಗಿಡಗೊಳು?


ನಮ್ಮೂರಿಗಿ ಬರೊ ಮಂದಿಗೆ ಟೊಂಗೆ ಅಲ್ಲಾಡ್ಸ್ಕೊತ
ಬರ್ರಿ ಬರ್ರಿ ಅಂತ ಕರಿತಿದ್ದ ಗಿಡಗೊಳು;


ಅಪ್ಪಿ-ತಪ್ಪಿ ಊರಕಡೆ ಬರೊ ಮಂಗ್ಯಾಗಳಿಗಿ,
ಧರ್ಮಸಾಲಿಯಂಗ ಇದ್ದ ಗಿಡಗೊಳು;


ಹೊಡದ ಕಲ್ಲಿಗಿ ಬೊಗಸಿಗಟ್ಟಲೆ ಚಿಗರ ಹುಣಸಿ ಕೊಟ್ಟು,
ಹುಡುಗರಿಗೆಲ್ಲಾ ಸಮಾಧಾನ ಮಾಡ್ತಿದ್ದ ಗಿಡಗೊಳು;


ತಿಳಿ ಹಸಿರ ಬಣ್ಣದ ಎಲಿ, ಬಿಳಿ ಬಣ್ಣದ್ದ ಹೂವ ಇಟ್ಕೊಂಡು,
ಡೌಲು ಮಾಡ್ಕೊಂಡು ನಿಂದರ್‌ತಿದ್ದ ಗಿಡಗೊಳು;


ಮುಗಿಲನಷ್ಟು ಎತ್ತರಾ, ಗುಡ್ಡದಂತಾ ಬೊಡ್ಡಿ,
ಊರ ಕಾಯೋ ಕ್ವಾಟಿ ಬಾಗಿಲನಂಗ ಇದ್ದ ಗಿಡಗೊಳು;


ಬಸ್ ತಪ್ಸ್ಕೊಂಡ ಮಂದಿಗಿ, ನೆರಳ ಕೊಟ್ಟು,
ಗಾಳಿ ಬೀಸಿ, ಜೋಗಳ ಹಾಡ್ತಿದ್ದ ಗಿಡಗೊಳು;
 

ಸಾಲಿಗಿ ಬಂದ ಹುಡುಗರಿಗಿ, ಕೈ ಮಾಡಿ ಕರದು,
ಗಿಡ-ಮಂಗ್ಯಾ ಆಟ ಕಲಸತ್ತಿದ್ದ ಗಿಡಗೊಳು;


ಯಾರೋ ಪುಣ್ಯಾತ್ಮ, ಊರ ಮುಂದಿನ ರಸ್ತಾದುದ್ದಕ್ಕ
ನಮ್ಮಂತಹವರ ಸಲುವಾಗಿ ಬೆಳೆಸಿದ್ದ ಗಿಡಗೊಳು;



ಎಲ್ಲಿ ಹೋದ್ವು ಆ ಹುಣಸಿ ಗಿಡಗೊಳು?




-------------------------------------------------------------

ನನ್ನ ಮೆಚ್ಚಿನ ಕವಿ ಗುಲ್ಜಾರ್ ಅವರ “ಇಮ್ಲಿ ಕಾ ಪೇಡ್”
ಕಾವ್ಯ ವಾಚನ (ಯು ಟ್ಯೂಬ್ ನೊಳಿಗ) ನೋಡಿ ನನಗೆ ನಮ್ಮ ಸಾಲಿ ಮುಂದ... ಪಿ ಡಬ್ಲು ಡಿ ಮುಂದ........ ಇದ್ದ ಹುಣುಸಿ ಗಿಡಗೋಳು ನೆನಪಾದು.   ಆವಾಗ ಈ ಕವನ ಅನ್ನುವಂತಾದ್ದದ್ದು ಹೊರಗ ಬಂತು.

ತ್ರಾಸು ತೊಗೊಂಡು ಈ ಕವನ ಓದಿದ್ದ ಸುಚಿನ್, ಜ್ಯೋತಿ, ಪಲ್ಲವಿ, ರಾಜೀವ ಮತ್ತು ನಮ್ಮಣ್ಣ ಶರದ...ಎಲ್ಲಾರಿಗೂ ಧನ್ಯವಾದಗಳು.

ಈ ಸಾಲುಗಳನ್ನು ಓದಿ, “ಗುರುರಾಜಾ...ನಿನ್ನ ಗದ್ಯ ಭಾಳ ಚೊಲೋ ಅದ, ಅದರಾಗಿ ಬರಿ” ಅಂತ ಆಶೀರ್ವಾದ ಮಾಡಿದ ನಮ್ಮಕ್ಕ ಸೌ ।। ಮಿತ್ರವಿಂದಾಗೂ ನನ್ನ ನಮಸ್ಕಾರ ಅದ