ಸೋಮವಾರ, ಜುಲೈ 10, 2017

ಮತ್ತ ಇನ್ನೊಮ್ಮ ಭೆಟ್ಟಿಯಾಗುಣು

ಮತ್ತ ಇನ್ನೊಮ್ಮ ಭೆಟ್ಟಿಯಾಗುಣು

ಜುಲೈ ೭ ೨೦೧೭

ಆಡ್ಕೊತ್, ಹಾಡ್ಕೋತ, ಮಾತಾಡ್ಕೊತ್

ಇಷ್ಟೊತ್ತು ರಸ್ತಾ ಕಳದಿದ್ದು ಗೊತ್ತ ಆಗ್ಲಿಲ್ಲ, ನೋಡು;

ಇನ್ನ, ನಾ ನನ್ನ ಹಾದಿ ಹಿಡೀತೀನಿ,

ನೀ ನಿನ್ನ ದಾರಿ ಹಿಡಿಯುವಂತಿ

ಮತ್ತ ಇನ್ನೊಮ್ಮ ಭೆಟ್ಟಿಯಾಗುಣು, ಹರಟಿ ಹೊಡಿಯೋಣು;

ಆಗ ನಾ ನನ್ನ ಸುದ್ದಿ ಹೇಳ್ತೀನಿ,ನೀ ನಿನ್ನ ಸುದ್ದಿ ಹೇಳೋವಂತಿ;

ಸಧ್ಯಕ್ಕ, ಸತರಂಗಿ ಬಿಲ್ಲ ಹಿಡಿಲಿಕ್ಕಿ ಹೋಂಟೀನಿ

ಹಾರೂ ಕುದರಿ ಕಟ್ಟಲಿಕ್ಕಿ ಹೋಂಟೀನಿ

ಕಂಡ ಕನಸಿನ ಹಿಂದ ಹಿಂದ ಹೋಂಟೀನಿ

ಮತ್ತ ಇನ್ನೊಮ್ಮ ಭೆಟ್ಟಿಯಾಗುಣು, ಹರಟಿ ಹೊಡಿಯೋಣು;

ಆಗ ನಾ ನನ್ನ ಸುದ್ದಿ ಹೇಳ್ತೀನಿ,ನೀ ನಿನ್ನ ಸುದ್ದಿ ಹೇಳೋವಂತಿ;

ಮುಂಜಾನೆ ದರ್ಶನಿಯೊಳಗ ಇಡ್ಲಿ ತಿನ್ನುವಾಗ,

ಮಧ್ಯಾನ್ಹದ ಟ್ರಾಫಿಕ್ ಜಂಕ್ಷನ್ -ನಾಗ,

ಸಂಜಿ ಹೊತ್ತ, ದೇವರಗುಡಿ ಮುಂದ ಚಪ್ಪಲಿ ಬಿಡುವಾಗ,

ಮತ್ತ ಇನ್ನೊಮ್ಮ ಭೆಟ್ಟಿಯಾಗುಣು, ಹರಟಿ ಹೊಡಿಯೋಣು;

ಆಗ ನಾ ನನ್ನ ಸುದ್ದಿ ಹೇಳ್ತೀನಿ,ನೀ ನಿನ್ನ ಸುದ್ದಿ ಹೇಳೋವಂತಿ

ಫೇಸಬುಕನಾಗ ಸಂಸಾರ ಫೋಟೋ ಹಾಕಿದಾಗ,

ಹಬ್ಬ-ಹುಣ್ಣಿವಿಗಿ ಕಳಿಸೋ ವಾಟ್ಸಪ್ ಮೆಸೇಜ್ನಾಗ್,

ಮಕ್ಕಳು ದೊಡ್ದೋರಾಗಿ ಕೈ ಖಾಲಿ ಆದಾಗ

ಮತ್ತ ಇನ್ನೊಮ್ಮ ಭೆಟ್ಟಿಯಾಗುಣು, ಹರಟಿ ಹೊಡಿಯೋಣು;

ಆಗ ನಾ ನನ್ನ ಸುದ್ದಿ ಹೇಳ್ತೀನಿ,ನೀ ನಿನ್ನ ಸುದ್ದಿ ಹೇಳೋವಂತಿ

ಸಂಜಿ ಕೆಂಪು ರಂಗ ರಂಗ ಆದಾಗ,

ಗುಲ್ ಮೊಹರ್ ಗಿಡದಾಗ ಹೂ ಬಿಟ್ಟಾಗ,

ಮಣ್ಣಿನ ರಸ್ತಾದಾಗ ಹನಿ ಮಳಿ ಬಿದ್ದಾಗ

ನಾವು ಮತ್ತ ಇನ್ನೊಮ್ಮ ಭೆಟ್ಟಿಯಾಗುಣು, ಹರಟಿ ಹೊಡಿಯೋಣು;
ಆಗ ನಾ ನನ್ನ ಸುದ್ದಿ ಹೇಳ್ತೀನಿ,ನೀ ನಿನ್ನ ಸುದ್ದಿ ಹೇಳೋವಂತಿ

ಕಾಮೆಂಟ್‌ಗಳಿಲ್ಲ: