ಗುರುವಾರ, ಮಾರ್ಚ್ 11, 2010

....ಸ್ವರ್ಗಾದಪಿ ಗರಿಯಸಿ

ವಾಪಸು ಬೆಂಗಳೂರಿಗೆ ಹೊರಡೊ ತಯಾರಿ ಶುರು ಆದಾಗ ಯಥಾಪ್ರಕಾರ ನನ್ನ ಮನಸ್ಸು ಚೂಡಾ (ನನ್ನ ಮನಸ್ಸು ಮಂಡಿಗೆ ತಿನ್ನೊದಿಲ್ಲ) ತಿನ್ನೊಕೆ ಶುರು ಮಾಡತು. ಫ಼್ಲೈಟ್ ಬೆಂಗಳೂರು ಮುಟ್ಟಿದ ತಕ್ಷಣದಿಂದ ಮುಂದಿನ ನಾಲ್ಕು ತಿಂಗಳು ಏನೇನು ಮಾಡಬೇಕು ಅನ್ನೊದು ಇಷ್ಟುದ್ದ ಪಟ್ಟಿ ಮಾಡಿ ಕಣ್ಣು ಮುಂದೆ ಇಟ್ಕೊಂಡೆ. ಅದರೊಳಗೆ ಬ್ಲಾಗ್ ಬರಿಯೊದೂ ಒಂದು ಇತ್ತು. ಯಾವ ಯಾವ ವಿಷಯದ ಬಗ್ಗೆ ಬರಿಯಬೇಕು ಅನ್ನೊದುನ್ನೂ ಲೆಖ್ಖಾ ಹಾಕಿ ಅಯಿತು.

ಬೆಂಗಳೂರಿಗೆ ಬಂದು ಸುಮಾರು ಎರಡು ವಾರ ಆದ್ರೂನು, ಕಣ್ಣ ಮುಂದೆ ಇರೊ ಪಟ್ಟಿಯೊಳಗಿನ ಒಂದು ಕೆಲಸಾನೂ ಮಾಡ್ಲಿಕ್ಕಿನೂ ಆಗಿಲ್ಲ, ಇಛ್ಛಾನೂ ಪೂರ್ತಿ ಆಗಿಲ್ಲಾ. ಆಫೀಸಿನ ಕೆಲಸದ ಗಡಿಬಿಡಿಯೊಳಗ ಮತ್ತು ಸಿನಿಮಾ ಕಥೆ ಚರ್ಚೆಯೊಳಗ .......ಮತ್ತೆ ಅದೇ ಚಕ್ರದ ಗಿರಕಿಯೊಳಗ ೧೫ ದಿನಾ ಕಳದ್ವು.

ಮೈನಸ್‍ ೨೬ ಡಿಗ್ರಿಯಿಂದ, ಹದಿನೆಂಟು ಘಂಟೆಯೊಳಗೆ ೩೦ ಡಿಗ್ರಿ ಬಿಸಿಲಿನ ಬಂದಾಗ ಆಗುವ ಅನುಭವಕ್ಕೆ ಅಕ್ಷರ ರೂಪ ಕೊಡಬೇಕು, ಬೆಂಗಳೂರಿನಲ್ಲಿ ಮೂರು ತಿಂಗಳೊಳಗ ಆಗಿರೊ ಸಣ್ಣ-ದೊಡ್ದ ಬದಲಾವಣೆಗಳನ್ನು ಗಮನಿಸಿ ಅವುಗಳ ಬಗ್ಗೆ ಬರಿಬೇಕು, ಈ ಸಣ್ಣ ಮಧ್ಯಂತರದ ನಂತರ ನನ್ನ ನೋಡಿದವರ ಮಾತುಗಳನ್ನ ಇಲ್ಲಿಗೆ ತರಬೇಕು, ಅಂತೆಲ್ಲಾ ಅಂದುಕೊಂಡಿದ್ದೆ. ಆದ್ರ ಅವ್ಯಾವು ಇಲ್ಲಿಯವರಿಗೆ ಆಗಿಲ್ಲ.

ಬೆಂಗಳೂರಿಗೆ ಬಂದ ಮೇಲೆ, ಮಕ್ಕಳ ಜೊತೆ ಭರ್ಪೂರಾಗಿ ಆಟ ಆಡಿದೆ. ಮೈಸೂರು ರೋಡ್‍ಲ್ಲಿರೊ ಹೊಸಾ ಬಿಗ್ ಸಿನೆಮಾದಲ್ಲಿ, "ರೋಡ್ ಮೂವಿ" ಸಿನೆಮಾ ನೋಡಿದೆ, ನೆಟ್‍ಕಲ್ಲಪ್ಪಾ ಸರ್ಕಲ್‍ಲ್ಲಿರೊ ಚಿಕ್ಕ ಅಂಗಡಿನಲ್ಲಿ ಗಿರ್ಮಿಟ್ ಮತ್ತೆ ಮಿರ್ಚಿ ಭಜಿ ಗೆಳೆಯಾ ರಾಜೀವನ ಜೊತೆ ತಿಂದೆ, ಎಲ್‍ಐಸಿ ದುಡ್ಡು ಕಟ್ಟೋ ನೆವದಾಗ ೫-೬ ವರ್ಷದ ನಂತರ ಯಶವಂತರಪುರ ಕಣ್ಣರಳಿಸಿ ತಿರಗಾಡಿದೆ, ಕಾಲು ನೋವು ಅಂತ ಮಲಗಿದ್ದ ರಾಜೀವನ್ನ ಅಪೊಲೋಗೆ ಕರ್ಕೋಂಡು ಹೋಗಿದ್ದೆ, "ಚಾಟ್ಸ್ ಶೋ" ಅನ್ನೋ ನೆವಾದಾಗ ಪೂಜಾ ಗಾಂಧಿ, ರಘು ಮುಖರ್ಜಿ ಜೊತೆ ಪಾನಿ ಪೂರಿ ತಿಂದು ಸಿನಿಮಾದ ಬಗ್ಗೆ ಹರಟೆ ಹೊಡ್ದೆ, ಎಷ್ಟೊ ವರ್ಷದ ನಂತರ ಭೇಟಿ ಆದ ಸಂಗಮೇಶ ಜೊತೆ ಪುಸ್ತಕ ಮೇಳಕ್ಕೆ ಹೋಗಿದ್ದೆ, ಇವ್ಯಾವು ನಾ ಮಾಡಬೇಕು ಅಂತ ಅನ್ಕೊಂಡಿರಲ್ಲಿಲ್ಲ ಆದರೂ ಈ ಸಣ್ಣ ಸಣ್ಣ ಖುಷಿಯನ್ನ ಬೊಗಸೆಯೊಳಗೆ ಹಿಡ್ಕೊಂಡೆ.

ಏನೇ ಆದ್ರೂ ನಮ್ಮೂರನೊಳಗ, ನಮ್ಮವರ ಜೋಡಿ ಇರೋದೆ ಒಂದು ಸಂತೋಷ. ಅದಕ್ಕೆ ಅಲ್ವಾ ಹಿರಿಯರು ಹೇಳಿದ್ದು, ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ....ಅಂತ.