ಬುಧವಾರ, ಅಕ್ಟೋಬರ್ 26, 2016

ಕೊಟ್ಟದ್ದು ತನಗೆ – ಬಚ್ಚಿಟ್ಟಿದ್ದು ಪರರಿಗೆರಾಮಾಪುರ ಅಂತ ಒಂದು ಊರು ಇತ್ತು. ಊರಾಚೆ ಸ್ವಲ್ಪ ದೂರದಲ್ಲಿ ಒಂದು ಮಕ್ಕಳಿಗೆ ವಿದ್ಯೆ-ಬುದ್ಧಿ ಕಲಿಸೋ ಒಂದು ಶಾಲೆ ಇತ್ತು. ಶಾಲೆಗೆ ಹೋಗೋ ರಸ್ತೆಯಲ್ಲಿ ಒಂದು ದೊಡ್ಡ ಆಲದ ಮರ ಇತ್ತು. ಅಲ್ಲೇ ಪಕ್ಕದಲ್ಲಿ ಒಂದು ಪುಟಾಣಿ ಕೆರೆನೂ ಇತ್ತು. ಮರದ ಕೆಳಗಡೆ ಒಬ್ಬ ಅಜ್ಜಿ ಒಂದು ಗೂಡಂಗಡಿ ಇಟ್ಟಕೊಂಡು ವ್ಯಾಪಾರ ಮಾಡ್ತಾ ಇದ್ದಳು. ಶಾಲೆಗೆ ಹೋಗೋ ಮಕ್ಕಳು ಅಜ್ಜಿ ಅಂಗಡಿಯಲ್ಲಿ ಪೆನ್-ನೋಟ್ ಬುಕ್ ಮತ್ತು ಕಥೆ ಪುಸ್ತಕ ತೊಗೋತಿದ್ದರು. ಅವಳ ಅಂಗಡಿಯಲ್ಲಿ ಸಿಗುತ್ತಿದ್ದ ಕೊಬ್ಬರಿ ಮಿಠಾಯಿ ಮಕ್ಕಳಿಗೆ ಅಚ್ಚುಮೆಚ್ಚಿನ ಸಿಹಿ ತಿಂಡಿಯಾಗಿತ್ತು. ಮಕ್ಕಳು ಶಾಲೆ ವಿರಾಮದ ವೇಳೆಗೆ ಕೊಬ್ಬರಿ ಮಿಠಾಯಿ ತಿನ್ನಲು ಬರುತ್ತಿದ್ದರು.

ಒಂದಿನ ಪಕ್ಕದ ಊರಿನಿಂದ ಸೋಮನಗೌಡರು, ರಾಮಾಪುರಕ್ಕೆ ಬರುತ್ತಿದ್ದರು. ಬಿಸಿಲಿನ ತಾಪಕ್ಕೆ ಅಲ್ಲಿಯೇ ಇದ್ದ ಕೆರೆಯ ತಣ್ಣನೆ ನೀರಿನಲ್ಲಿ  ಕೈ ಕಾಲು ಮುಖ ತೊಳೆದು, ಮರದ ಕೆಳಗಿದ್ದ ಅಜ್ಜಿಯ ಅಂಗಡಿಗೆ ಮಜ್ಜಿಗೆ ಕುಡಿಯಲು ಬಂದರು.

ಅಷ್ಟರಲ್ಲಿ ಕೆಲ ಮಕ್ಕಳು ಅಲ್ಲಿಗೆ ಮಿಠಾಯಿ ಕೊಳ್ಳಲು ಬಂದರು. ಒಂದು ಹುಡುಗ ಮಿಠಾಯಿ ಕೊಳ್ಳುವಾಗ “ಅಜ್ಜಿ ನಂಗೆ ಎರಡು ಮಿಠಾಯಿ, ಗಿಣಿಮರಿಗೊಂದು ಮಿಠಾಯಿ” ಎಂದು ದುಡ್ಡು ಕೊಟ್ಟು, ಎರಡು ತಾನು ಇಟ್ಟುಕೊಂಡು, ಇನ್ನೊಂದು ಪಕ್ಕದಲ್ಲಿಯೇ ಇಟ್ಟಿದ್ದ ಗಾಜಿನ ಭರಣಿಗೆ ಹಾಕಿ ಹೋದನು. ಇನ್ನೊಬ್ಬ ವಿದ್ಯಾರ್ಥಿನಿ ಕೂಡ ತಾನೊಂದು ಮಿಠಾಯಿ ತೊಗೊಂಡು ಇನ್ನೊಂದು ಮಿಠಾಯಿ “ಗಿಣಿಮರಿ”ಗೋಸ್ಕರ ಭರಣಿಯಲ್ಲಿ ಹಾಕಿಟ್ಟು ಎರಡು ಮಿಠಾಯಿ ದುಡ್ಡು ಕೊಟ್ಟು ಹೋದಳು.

ಇದು ಸೋಮನಗೌಡರಿಗೆ ಆಶ್ಚರ್ಯ ತಂದಿತು. ಕೆಲ ಮಕ್ಕಳು ತಾವು ದುಡ್ಡು ಕೊಟ್ಟು ತೆಗೆದುಕೊಂಡ ಮಿಠಾಯಿ ಒಂದು ಭಾಗವನ್ನು “ಗಿಣಿಮರಿ” ಗೋಸ್ಕರ ಇಟ್ಟು ಹೋಗುತ್ತಿದ್ದಾರಲ್ಲ, ಇದು ಯಾವ ಗಿಣಿ ಮರಿಗೆ ಎಂದು ಯೋಚನೆ ಮಾಡಿದರು.

ಅಷ್ಟರಲ್ಲಿ ಅಲ್ಲಿಯೇ ಹೋಗುತ್ತಿದ್ದ ಅಕ್ಕ ಮತ್ತು ತಮ್ಮ ಇಬ್ಬರು ಪುಟ್ಟ ಬಡ ಮಕ್ಕಳು ಅಂಗಡಿಗೆ ಬಂದರು. ಅಕ್ಕ ತನ್ನ ತಮ್ಮನಿಗೋಸ್ಕರ ಗಾಜಿನ ಭರಣಿಯತ್ತ ಕೈ ತೋರಿಸುತ್ತ, ಅಜ್ಜಿಯನ್ನು “ಗಿಣಿಮರಿಗೋಸ್ಕರ ಇಟ್ಟಿದ್ದ ಮಿಠಾಯಿ, ನಂಗೆ ಮತ್ತು ನನ್ನ ತಮ್ಮನಿಗೆ, ಕೊಡಿ”. ಎಂದು ಕೇಳಿದಳು ಅಜ್ಜಿ ನಗು ನಗುತಾ ಭರಣಿಯಿಂದ ಎರಡು ಮಿಠಾಯಿ ತೆಗೆದು ಕೊಟ್ಟಳು. ಸೋಮನಗೌಡರಿಗೆ ಇದನ್ನು ನೋಡಿ ತುಂಬಾ ಸಂತೋಷವಾಯಿತು. ಶಾಲಾ ಮಕ್ಕಳು, ತಮ್ಮ ತಿಂಡಿಯನ್ನು ಈ ರೀತಿಯಲ್ಲಿ ಹಂಚುವದನ್ನು ತಿಳಿದು ಮಕ್ಕಳ ಬಗ್ಗೆ ಪ್ರ್ರೀತಿಯುಂಟಾಯಿತು.

ಅಜ್ಜಿ ಸೋಮನಗೌಡರಿಗೆ ಹೇಳಿದಳು, “ಇಲ್ಲಿ ಮಿಠಾಯಿ ಕೊಳ್ಳಲು ಆಗದ ಮಕ್ಕಳಿಗೆ ಎಂದು ಈ ಗಾಜಿನ ಭರಣಿಯಲ್ಲಿ ಮಿಠಾಯಿ ಬೇರೆ ಮಕ್ಕಳು ಕೊಂಡು ಇಟ್ಟಿರುತ್ತಾರೆ. ಇಲ್ಲಿ ಎಲ್ಲರಿಗೂ ಮಿಠಾಯಿ ದೊರೆಯುತ್ತದೆ. ಈ ಥರದ ತಿಳುವಳಿಕೆಯನ್ನು ನಮ್ಮ ಶಾಲೆ ಮೇಷ್ಟ್ರು ಹೇಳಿಕೊಟ್ಟಿದ್ದಾರೆ ”


“ಇಂಥಾ ಮೇಷ್ಟ್ರು ಮತ್ತು ಮಕ್ಕಳನ್ನು ಪಡೆದ ರಾಮಾಪುರವೇ ಧನ್ಯ” ಎಂದು ಉದ್ಗರಿಸಿದರು