ಹರಟೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹರಟೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಏಪ್ರಿಲ್ 20, 2014

ಹೀಗಿದೆ ಭಟ್ಟರ (ಬಗ್ಗೆ, ನಮ್ಮ) ಉವಾಚ

ಅದು ಇಸವಿ ೨೦೦೬ ಕೊನೆ ಮತ್ತು ೦೭ ಶುರುವಾತು ಇರಬೇಕು, ಓತಪ್ರೋತವಾಗಿವಾಗಿ ಹರಿದು ಬರುತ್ತಿದ್ದ ಏಕತಾನತೆಯ ಸಿನಿಮಾಗಳ ಬೇಗೆಯಲ್ಲಿ ಬೇಯುತ್ತಿದ್ದ ಕನ್ನಡ ಸಿನಿಮಾ ಪ್ರೇಕ್ಷಕನ ಬೇಗುದಿಗೆ “ಮುಂಗಾರು ಮಳೆಯ” ಸಿಂಚನವಾಯಿತು.ಮನೆಯ ಅಂಗಳದಲ್ಲಿ ಹನಿಯುತ್ತಿದ್ದ ಮಳೆಯಲ್ಲಿ ಕುಣಿದು ಕುಪ್ಪಳಿಸುವ ಮಕ್ಕಳಂತೆ ಪ್ರೇಕ್ಷಕ ಪ್ರಭು ಸಿನೆಮಾ ನೋಡಿ ಕುಣಿದಾಡಿದ. ರಾತ್ರೋರಾತ್ರಿ ಸಿನೆಮಾಕ್ಕೆ ಸಂಭಂದಿಸಿದವರು, ಮೆಜೆಸ್ಟಿಕ್-ನಿಂದ ಹೊರಟು ನೇರ ಚಂದ್ರನಾಚೆಗಿರುವ ಲೋಕದಲ್ಲಿ ತಾರೆಗಳಾಗಿ ಮಿಂಚಲಾರಂಭಿಸಿದರು.

ಭೋರ್ಗರೆಯುವ “ಮುಂಗಾರು ಮಳೆ”ಯ ಪರಿಣಾಮ ನೋಡಿ ಯೋಗರಾಜ ಭಟ್ಟರು “...ಏನು ನಿನ್ನ ಹನಿಗಳ ಲೀಲೆ?” ಎಂದು ಗುನುಗಿದರು. ಈ ಹಾಡು ಅವರನ್ನು ಸಿನೆಮಾ-ಕವಿಯಾನ್ನಾಗಿ ಮಾಡಿದರೂ, ಅವರ ಕಾವ್ಯದ ಚಂಡೆ ಸದ್ದು, ಇನ್ನೂ ಕನ್ನಡ ಚಿತ್ರರಂಗದ ಹೊಸ್ತಿಲಾಚೆಯೇ ನಿಂತಿತ್ತು. ಮುಂದೆ ಬಂದ ಅವರ ಸಿನೆಮಾಗಳಲ್ಲಿ, ಪಾತ್ರಗಳ ಮೂಲಕ ಅವರಾಡಿಸುವ ತುಸು ಪೋಲಿತನ ಬೆರೆತ ಉಡಾಫೆಯ- ವೇದಾಂತದ ಮಾರುದ್ದನೆಯ ಮಾತುಗಳು, ಕನ್ನಡಿಗರ ಮನದಲ್ಲಿ ಚಿತ್ರ ನಿರ್ದೇಶಕ ಭಟ್ಟರಿಗೊಂದು ಬೆಚ್ಚನೆಯ ಜಾಗ ಮಾಡಿಕೊಟ್ಟವು. ಸಿಕ್ಕಾಪಟ್ಟೆ ಮಾತಾಡುವ ನಾಯಕನ ನಿರೀಕ್ಷೆಯಲ್ಲಿ ಜನ, ಭಟ್ಟರ ಸಿನಿಮಾ ನೋಡಲು ಸೇರುತಿದ್ದರು.ಇದರ ಮಧ್ಯೆ ನಿಧಾನವಾಗಿ ಏರುವ ನಶೆಯಂತೆ, ಭಟ್ಟರ ಸಿನೆಮಾದಲ್ಲಿನ ಅವರೇ ಬರೆದ ಹಾಡುಗಳು ಕೇಳುಗರ ಕಿವಿಯಲ್ಲಿ ರಿಂಗಣಿಸತೊಡಗಿದವು. ಭಟ್ಟರನ್ನ ಕುರಿತು ಅವರ ಪತ್ನಿ “ಅವರು ಕವಿಯಾಗಿಯೇ ನನಗೆ ಹೆಚ್ಚು ಇಷ್ಟ” ಎಂದದ್ದು ಕಿರು ಸುದ್ದಿಯಾಗಿ, ಪತ್ರಿಕೆಯ ಮೂಲೆಯಲ್ಲಿ ಪ್ರಕಟವಾಯಿತು.

ಪಡ್ಡೆ ಹುಡುಗರ ಆಡುವ ಮಾತುಗಳನ್ನೇ ಹಾಡುಗಳನ್ನಾಗಿಸಿವ ಭಟ್ಟರ ಕಲೆಗೆ, ಹರಿಕೃಷ್ಣರ ಪಕ್ಕವಾದ್ಯಗಳು ಸರಿಯಾಗಿಯೇ ಸಾಥ ಕೊಟ್ಟವು. “ಹಳೇ ಪಾತ್ರೆ...ಹಳೇ ಕಬ್ಬಿಣ”, “ಖಾಲಿ ಕ್ವಾಟರ್ ಹಂಗೆ ಲೈಫು”, ಅಥವಾ “ಬೋಲ್ಡು ಇರದ ಬಸ್” ..ಎನ್ನುವ ಅತಿ ಸಾಧಾರಣ, ಆದರೆ ಅತ್ಯಂತ ಜನಪ್ರಿಯ ಹಾಡುಗಳ ಮಧ್ಯೆಯೇ... “ಸೌಂದರ್ಯ ಸಮರ, ಸೋತವನೆ ಅಮರ” ಬೆರಗುಗೊಳಿಸುವಂತಹ  ಸಾಲುಗಳ ಸೃಷ್ಟಿ ನಡೆಯಿತು. “ಗಂಡ-ಹೆಂಡತಿ ಇಬ್ಬರೂ ದುಡಿದು, ಸಾಲಾ ಮಾಡಿ ಮನೆಯ ಕಟ್ಟಿ ಮಕ್ಕಳು ಎಲ್ಲಿ ಹೋದರೂ ಅಂತ ಹುಡುಕಿ, ..ಲೈಫು ಇಷ್ಟೇನೇ”  ಎಂಬ ಸಾಲುಗಳ ಮೂಲಕ ನಗರ ಜೀವನಕ್ಕೆ ಒಂದು ಚೌಕಟ್ಟು ಕಟ್ಟಿ ಕೊಟ್ರೆ, “ಯಾರಿಗೆ ಹೇಳೋಣಾ ನಮ್ಮ ಪ್ರಾಬ್ಲಮ್...ಹುಡುಗರ ನೋವಿಗೆ ಇಲ್ಲಾ ಮುಲಾಮು” ಎನ್ನುತ್ತಾ ಪ್ರತಿ ಭಗ್ನ ಪ್ರೇಮಿಗಳ(?) ಪ್ರತಿನಿಧಿಯಾದರು. “ನಿನ್ನ ಮೂತಿ ನೋಡಬೇಕು..ಸ್ವಲ್ಪಾ ಗಡ್ಡ ಬೋಳ್ಸ್-ಯ್ಯ” ಹುಡುಗೀರ ಬಾಯಲ್ಲಿ ಹೇಳಿಸಿ ಹುಡುಗರನ್ನ ಸಮಾಧಾನ ಮಾಡಿದ್ರು. ಪವರ್ ಸ್ಟಾರ್ ಬಾಯಲ್ಲಿ “ಹುಡುಗೀರೇ ಸ್ಟ್ರಾಂಗ್ ಗುರೂ...” ಎಂದು ಹೇಳಿಸಿ, ಮಹಿಳಾ ದಿನಾಚಾರಣೆ ಮಾಡಿದ್ರು. “ಹಳೇ ಹುಬ್ಬಳಿ ಬಸ್ಟ್ಯಾ೦ಡನಾಗ ನಿಂತಿದ್ದೆ...ಮಿರ್ಚಿ ಮಂಡಕ್ಕಿನಾ ತಿಂದು ನಾ ಚಹಾ ಕುಡಿದೆ” ಅಂತಾ ತಮ್ಮ ಹಳೇ ಪುರಾಣ ಬಿಚ್ಚಿಟ್ಟರು. ಒಂದ ಕಡೆ “ಚಿಟ್ಟೆಗೆ ಚಡ್ಡಿ ಹಾಕಿದ್ರೆ” ಹೆಂಗೆ ಅಂತ ಯೋಚನೆ ಮಾಡಿದ್ರೆ, ಇನ್ನೊಂದ ಕಡೆ “ಸೈಕಲಲ್ಲಿ ತೆಂಗಿನ ಮರ ಹತ್ಲಾ ?” ಅಂತಾ ನಮ್ಮಂತಹವರ ಹತ್ರ ಕೇಳದ್ರು. ಮೂಗ-ನತ್ತು ಆಗಿ ಹುಟ್ಟಿದ್ರೆ “ಅವಳ” ಹತ್ರಾನೆ ಇರಬಹುದಾಗಿತ್ತು ಅನ್ನೋ ಹೊಸಾ ವಿಚಾರ ಮಾಡಿದ್ರು.  “ಒಬ್ಬಳನ್ನೇ ಲವ್ ಮಾಡಿ ಚೆನ್ನಾಗಿರಿ” ಅಂತಾ ವಯಸ್ಸಿಗೆ ಬಂದ ಹುಡುಗರಿಗೆ ಆಶೀರ್ವಾದ ಮಾಡಿದ್ರೂನೂ, ಅದೇ ಉಸಿರಲ್ಲಿ “ಇನ್ನೊಬ್ಬಳ ಫೋನ್ ನಂಬರ್ ಇಟ್ಕೊಂಡಿರೀ” ಅಂತ ಕಿವೀಲಿ ಹಿತವಚನ ಹೇಳಿದ್ರು. ಒಟ್ಟಿನಲ್ಲಿ, ಹದಿಹರಿಯದ ಹುಡುಗ ಹುಡುಗಿಯರಿಗೆ ಪ್ರೀತಿ-ಪ್ರೇಮಗಳ ಹೊಸ ಹೊಸ ವಾಖ್ಯಾನ ಕೊಟ್ರು, ಅಂತಹವರನ್ನ ಮತ್ತೆ ಕನ್ನಡ ಸಿನೆಮಾ ನೋಡೋಕೆ ಕರ್ಕೊಂಡು ಬಂದ್ರು. ಪತ್ರಕರ್ತರ ಹತ್ತಿರ “ಸಿನಿಮಾ ನೋಡುವವರೆ ನಲವತ್ತರ ಕೆಳಗಿನವರು, ನಾನು ಅಂತಹವರಿಗೆ ಸಿನಿಮಾ ಮಾಡೋದು” ಅಂತ ಅಲವತ್ತುಕೊಂಡರು.

 ನಿಜ ಹೇಳಬೇಕೂಂದ್ರೆ, ಒಬ್ಬ ಸಿನಿಮಾ ನಿರ್ದೇಶಕ ಕೇವಲ ತಾನು ಬರೆದ ಹಾಡಿನಿಂದಲೇ ಬೇರೆಯವರ ಸಿನೆಮಾಗಳನ್ನೂ ಗೆಲ್ಲಿಸಿಕೊಟ್ಟ ದಾಖಲೆ ಭಟ್ಟರದಾಯಿತು. ಬೇರೆ-ಬೇರೆ ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು, ಅನೇಕ ಕಲಾವಿದರು, ಹೆಸರಿನ ಮುಂದೆ ಅಭಿಮಾನಿಗಳು(?) ಕೊಟ್ಟ “ಸ್ಟಾರ್” ಅಂಟಿಸಿಕೊಂಡಿರುವವರು, ಪತ್ರಿಕಾಗೋಷ್ಠಿಯಲ್ಲಿ “ಭಟ್ಟರು ನಮ್ಮ ಸಿನೆಮಾಗೆ ಹಾಡು ಬರೆದಿದ್ದಾರೆ” ಎಂದು ಬಣ್ಣಿಸಿ ಸುದ್ದಿ ಹೇಳುವ ವಾತವರಣ ನಿರ್ಮಾಣವಾಯಿತು.ಎಲ್ಲಕ್ಕಿಂತಾ ಹೆಚ್ಚಾಗಿ ಸಿನಿಮಾ ಪತ್ರಕರ್ತರು ಭಟ್ಟರ ಕಾವ್ಯ ವಿಮರ್ಶೆಗೆ ತಮ್ಮ ತುಸು ಸಮಯ ಮತ್ತು ಪತ್ರಿಕೆಯ ಪುಟದಲ್ಲಿ ಒಂಚೂರು ಜಾಗ ಕೊಡತೊಡಗಿದರು. ಉತ್ಸಾಹಿ ನಿರ್ದೇಶಕರೊಬ್ಬರು ತಮ್ಮ ಹೊಸಾ ಸಿನೆಮಾಗೆ  “ಯೋಗರಾಜ” ಎಂಬ ಹೆಸರಿಟ್ಟು, ಕಳೆದು ಹೋದ ತಮ್ಮ ಯಶಸ್ಸನ್ನ ಹುಡುಕಲು ನೋಡಿದರು. ಕನ್ನಡ ಚಿತ್ರರಂಗದಲ್ಲಿ ನಡೆದ ಇದೆಲ್ಲಾ ಬೆಳವಣಿಗೆ ಭಟ್ಟರಿಗೆ ಕಿರೀಟ ಇಟ್ಟಂಗಾಯಿತು.

ಆದರೆ ಇನ್ನೊಂದು ಕಡೆ, ಪಡ್ಡೆ ಹುಡುಗರ ಮೊಬೈಲ್ ಗಳು ಸಾರ್ವಜನಿಕ ಸ್ಥಳಗಳಲ್ಲಿ , “ಎಕ್ಕ ರಾಜ ರಾಣಿ ನನ್ನ ಕೈಯೊಳಗೆ..ಹಿಡಿ ಮಣ್ಣು ನಿನ್ನ ಬಾಯೊಳಗೆ” ಎಂಬಂಥಾ ಹಾಡುಗಳು ಅರಚತೊಡಗಿದಾಗಲೋ, ಇಲ್ಲಾ, ಕೇವಲ ಇಂಗ್ಲಿಷ್-ಹಿಂದಿ ಸಿನೆಮಾಗಳನ್ನೇ ನೋಡುವ ಕನ್ನಡ FM ರೇಡಿಯೋ ಜಾಕಿ ಲಲನಾಮಣಿ  "ತನ್ನ ಇಂಗ್ಲೀಷ್ ಕನ್ನಡದಲ್ಲಿ “ಎಂಥಾ ಅಧ್ಭುತ ಹಾಡು ಗೊತ್ತಾ... ನಮ್ಮ ಭಟ್ಟರು ಬರೆದಿದ್ದು”  ಎಂದು ವರ್ಣನೆ ಮಾಡುತ್ತಾ “ಶಿವಾ ಅಂತ ಹೋಗುತಿದ್ದೆ...” ಎಂಬಂಥಾ ಹಾಡುಗಳನ್ನ ಕೇಳಿಸತೊಡಗಿದಾಗಲೋ, ಹಿರಿಯರು ಅಸಹನೆಯಿಂದ ಬೈದ ಬೈಗುಳಗಳನ್ನ ತಮ್ಮ ಎಂದಿನ ನಗುವಿನಲ್ಲಿಯೇ ಭಟ್ಟರು ಸ್ವೀಕರಿಸಿದರು, ಅದರ ಜೊತೆಯಲ್ಲಿಯೇ ಮಂಡಕ್ಕಿ ತಿನ್ನುತ್ತಾ, ಸಿಗರೇಟ್ ಹೊಗೆ ಹಾರಿಸುತ್ತಾ ತಮ್ಮ ಕಾವ್ಯ ರಚನೆ ಮುಂದುವರಿಸಿದರು,...”ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನ್ಸೋಕೆ ಹೋಗ್ಬಾರ್ದೂರಿ..” ಎಂಬ ಹೊಸ ವೇದಾಂತ ಹೇಳಿದರು.

ಒಮ್ಮೆ ಕನ್ನಡ ಚಿತ್ರರಂಗದ ಯುವ ನಿರ್ದೇಶಕರೊಬ್ಬರು ಭಟ್ಟರ ಬಳಿ ಹೋಗಿ ವಿಚಿತ್ರ ಶಬ್ದಗಳಲ್ಲಿ, ಅರ್ಥವೇ ಆಗದ ಸಾಲುಗಳನ್ನ ಬರೆದು, ಒಂದು ಹಾಡು ಸೃಷ್ಟಿ ಮಾಡಿ ಕೊಡಿ ಎಂದಾಗ, ಅವನ ಬೆನ್ನು ಚಪ್ಪರಿಸಿ ಸರಿಯಾದ ಜಾಗಕ್ಕೆ ಬಂದಿದಿಯಾ ಬಾರಯ್ಯಾ ಎಂದು ಕರೆದು ತಮ್ಮನ್ನೇ ಗೇಲಿ ಮಾಡಿಕೊಂಡು “ತಲೆ ಕೆಟ್ಟ ಭಟ್ಟ ಎಬಡಾ ತಬಡಾ” ಎಂದು ಬರೆದರಂತೆ. ಈ ಹಾಡಿನ ಪ್ರಯೋಗ ಒಂದು ರೀತಿ ಅಪರೂಪದ್ದು ಎನ್ನುವ ಅಭಿಪ್ರಾಯ ನನ್ನದು. ಬಹುಶಃ ಬೇರೆ ಭಾಷೆಯ ಸಿನೆಮಾಗಳಲ್ಲಿ ಈ ಥರದ ಪ್ರಯೋಗ ಆಗಿದೆಯೇ, ಎಂಬುದನ್ನ ನನ್ನ ಓದುಗ/ನೋಡುಗ ಮಿತ್ರರೇ ಹೇಳಬೇಕು.

ಭಟ್ಟರ ಕಾವ್ಯ ಸೃಷ್ಟಿ ಮುಂದುವರೆಯಲಿ... ಆಗಾಗಲಾದರೂ, ನಮ್ಮಂತ ಕಾವ್ಯ ಪ್ರೇಮಿಗಳಿಗೊಸ್ಕೊರ ಅಂದ್ರೆ ನಲವತ್ತರ ಮೇಲಿನವರಿಗೂ ಸಹ,  “ಖಾಲಿ ಹಾಳೆಗಿಂತ ಒಳ್ಳೆ ಕಾವ್ಯ ಇಲ್ರಿ....” ಎನ್ನುವಂತಹ ಸಾಲುಗಳನ್ನ ಬರೆಯಲಿ ಎಂದು ಆಶಿಸುತ್ತಾ ಅವರೇ ಬರೆದು, ಓದಿದ ಒಂದು ಸಿನೆಮಾ ಕವನ ನಿಮಗಾಗಿ,

 

ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ? ಬರಿ ಪೋಲಿ ಕನಸ?
ಮಾಮೂಲಿ ಕೋತಿಯ-ತಾರುಣ್ಯ ಗೀತೆಯಲ್ಲಿ ಉತ್ತರ ಕಮ್ಮಿ ಪ್ರಶ್ನೆಯೇ ಜಾಸ್ತಿ
ದಾರೀಲಿ ಕೈಕಟ್ಟಿ ನಿಂತಿರಲೇ? ಹೃದಯಾನ ಸಂಪೂರ್ಣ ಬಿಚ್ಚಿಡಲೇ?
ಮುಂಗುರುಳ ಸ್ಪ್ರಿಂಗಲ್ಲಿ ಜೋತಾಡಲೇ? ಕಣ್ಣ ರೆಪ್ಪೆಯ ಮೇಲೆ ಮಲಗಿರಲೇ?
ಆಸೆಗಳ ನೆನೆಸಿ ಕೈ ಬೆರಳು ಸವೆದಿದೆ, ಎಲ್ಲ ಹೇಳಿದರೂ ಇನ್ನೇನೋ ಉಳಿದಿದೆ
ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ? ಬರಿ ಪೋಲಿ ಕನಸ?

 ಎಲ್ಲಿಯೂ ಹೋಗದ ನಿಂತ ಬಸಲ್ಲಿ ಸೀಟ-ಒಂದ ಹಿಡಿದವನು ನಾನು,
ಇಳಿ ಸಂಜೆಯಲ್ಲಿ ನನ್ನ ನಂಬರಿಗೆ ನಾನೇ ಮಾಡುವೆನು ಪೋನು
ಈ ನಡುವೆ ಹೀಗೆ ಎಲ್ಲಿಯೋ ನೋಡುವೆನು ಎಲ್ಲಿಗೋ ಹೋಗುವೇನು, ಏನ್ನನ್ನೋ ಕಾಯುವೆನು
ನೀ ಸಿಕ್ಕರೂ, ಸಿಗದಿದ್ದರೂ, ಎದೆ ತುಂಬಾ ಹಾಡು
ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ? ಬರಿ ಪೋಲಿ ಕನಸ?

ಉಪಸಂಹಾರ

ಆಕಾಶ ಸ್ಟುಡಿಯೋನಲ್ಲಿ ನಾನು ನಿರ್ದೇಶಿಸಿದ ಚುಟುಕು ದೃಶ್ಯಗಳ ಡಬ್ಬಿಂಗ್ ಗೆ ಹೋದಾಗ ಭಟ್ಟರು ತಮ್ಮ “ಪಂಚರಂಗಿ” ಸಿನೆಮಾದ ಡಬ್ಬಿಂಗ್ ನಲ್ಲಿದ್ದರು. ಅವರ ಕೆಲಸ ಮುಗಿದ ಮೇಲೆ ನಮ್ಮ ಡಬ್ಬಿಂಗ್ ಇತ್ತು. ನಾನು, ರಾಜೇಂದ್ರ ಕಾರಂತ ಮತ್ತು ಇತರ ಸ್ನೇಹಿತರು ಕಾಯುತ್ತಿರುವಾಗ, ಆ ಸಿನೆಮಾದ ನಾಯಕ ತಾರಾ ಗತ್ತಿನ ಓರೇನೋಟಿನಲ್ಲಿ ಕೂತಿದ್ದ ನಮ್ಮಲ್ಲರನ್ನುಅಳೆದು ಮುಂದಿನ ಕೋಣೆಗೆ ಹೋದರೆ, ಆಮೇಲೆ ಬಂದ ಭಟ್ಟರು ನನ್ನನ್ನು ಮಾತಾಡಿಸಿ ನಾನು ಚಿತ್ರಿಸಿರುವ ದೃಶ್ಯಗಳ ಬಗ್ಗೆ ಕುತೂಹಲ ವ್ಯಕ್ತ ಪಡಿಸಿದರು. ಸಂಕೋಚದಿಂದ ದೂರ ನಿಂತಿದ್ದ ರಾಜೇಂದ್ರ ಕಾರಂತರನ್ನು ಪರಿಚಯ ಮಾಡಿಸಿದಾಗ, “ಅಯ್ಯೋ ನಂಗೊತ್ತು ಅಧ್ಭುತ ನಟ ಮತ್ತೆ ನಿರ್ದೇಶಕ..” ಎಂದೆಲ್ಲಾ  ಸೌಹಾರ್ದದ ಮಾತಾಡಿ, ಮತ್ತೆ ಎಂದಿನ ಶೈಲಿಯಲ್ಲಿ ಸಿಗರೇಟ್ ಅಂಟಿಸಿಕೊಂಡು ಹೊರಟು ಹೋದರು.
ಅಂದಂಗೆ, ರಾಜೇಂದ್ರ ಕಾರಂತ ಮತ್ತು ನಾನು, ಅಚಾನಕ್ ಆಗಬಹುದಾದ ಭಟ್ಟರ ಆ ಇನ್ನೊಂದು ಭೇಟಿಗೆ ಕಾಯುತ್ತಿದ್ದೇವೆ.

ಭಾನುವಾರ, ಜನವರಿ 20, 2013

ಒಂದು ಅಪ್ರಕಟಿತ ಸಂಶೋಧನಾ ಲೇಖನ

ಒಂದು ಅಪ್ರಕಟಿತ ಸಂಶೋಧನಾ ಲೇಖನ

-ಗುರುರಾಜ ಕುಲಕರ್ಣಿ (ನಾಡಗೌಡ)


ನಾನು ಬೆಂಗಳೂರಿಗೆ ಬಂದ ಹೊಸತರೋಳಗ ನಡಿದಿರೋ ಕಥಿ ಇದು. ಆವಾಗ ಬೆಂಗಳೂರು ಈಗಿನಷ್ಟು ಹಾಳು ಆಗಿರಲ್ಲಿಲ್ಲ, ಕೆಂಪೇಗೌಡರು ಮ್ಯಾಲನಿಂದ ನೋಡಿದಾಗ ಸಂತೋಷ ವ್ಯಕ್ತ ಪಡಿಸದೇ ಇದ್ದರೂ ಈಗಿನಂಗ ಬೆಂಗಳೂರ ನೋಡಿ ದುಃಖ ಅಂತೂ ಪಡತಿರಲ್ಲಿಲ್ಲ ಅಂತ ನಾನು ಅನ್ಕೊತಿನಿ.


ಬ್ಯಾಸಿಗಿಗೂ, ಸಂಜಿ ಮುಂದ ನಾಲ್ಕು ಹನಿ ಉದುರಿ ಹವಾ ತಣ್ಣಗ ಇರ್ತಿತ್ತು. ರೋಡ ಮ್ಯಾಲ ಒಂದ ನಾಲ್ಕಾರು ಕಾರು ಓಡಾಡ್ತದ್ದಿವು. ಧೂಳ, ಕಸ ಅಂತ ಏನೂ ಇರ್ತಿರಿಲ್ಲ. ನಿಮಗ ಕಣ್ಣ ದೃಷ್ಟಿ ಸರಿ ಇದ್ದರ, ಬ್ರಿಗೆಡ್ ರಸ್ತಾ ಜಂಕ್ಷನ್ ಹತ್ತರ ನಿಂತರ, ಎಂ ಜಿ ರಸ್ತಾ ಕೊನಿನೂ ಕಾಣಿಸ್ತಿತ್ತು.

ಕಬ್ಬನ ಪಾರ್ಕ್ನಾಗ ಇನ್ನಾ ಹಸಿರು ಇರತ್ತಿತ್ತು, ಅಲ್ಲಲ್ಲಿ ಗುಲ್ ಮೊಹರ್ ಗಿಡಗಳು ಕೆಂಪು ಹಳದಿ ಹೂ ಬಿಟ್ಟು, “ನೀ ನಡೆವ ದಾರಿಯಲ್ಲಿ ನಗೆ ಹೂಬಾಡದಿರಲಿ” ಅಂತ ಹಾಡ ಹಾಡತ್ತಿದ್ದವು. ಲಾಲಬಾಗನಾಗ ರುಚಿ ಇದ್ದ ಹಣ್ಣು ಹಂಪಲ ತಿನ್ನಿಲ್ಲಿಕ್ಕಿ ಸಿಗಿತ್ತಿದ್ವು ಮತ್ತ ಅಲ್ಲಿ ಮಂದಿಗಿ ವಾಕಿಂಗ ಮಾಡ್ಲಿಕ್ಕಿ, ಗಾಡಿ ಪಾರ್ಕಿಂಗ್ ಮಾಡ್ಲಿಕ್ಕಿ ಜಾಗ ಇರತ್ತಿತ್ತು.

ಮೆಜೆಸ್ಟಿಕನಾಗ ಅಣ್ಣಾವ್ರುದು, ಸಾಹಸ ಸಿಂಹನವರದು ಕಟೌಟಗಳಿಗೆ ಖರೆ ಖರೆ ಅಭಿಮಾನಿಗಳು ಹಾಲು, ಹಾರ, ಜೈಕಾರ ಹಾಕ್ತಿದ್ದರು. ಈ ಫ್ಲೈ ಒವರಗಳು, ಸಬ್ ವೇ-ಗಳು, ಒನ್ ವೇ-ಗಳು ಒಂದೂ ಇರಲ್ಲಿಲ್ಲ. ಜಯನಗರ ಫೋರ್ಥ್ ಬ್ಲಾಕ ಶಾಪಿಂಗ್ ಕಾಂಪ್ಲೆಕ್ಸ್ ನಮ್ಮಂತಾವರಿಗೆ “ಹ್ಯಾಂಗ ಔಟ್” ಜಾಗ ಆಗಿತ್ತು.

ಗಣಪತಿ ಹಬ್ಬಕ್ಕ, ಇಲ್ಲಾ ರಾಜ್ಯೋತ್ಸವಕ್ಕ ಹಿರಣ್ಣಯ್ಯನಂತೋರು ಅಚ್ಚ ಕನ್ನಡದ ನಾಟಕ ಮಾಡ್ತಾ ಇದ್ದರು.

ರಾತ್ರಿ ೧೦ ಗಂಟೆಗೆ ಆಟೋ ಬೇಕು ಅಂದ್ರ..ಬಿಕೋ ಅನ್ನೋ ರೋಡನಾಗ ಯಾವ ಗಾಡಿನೂ ಸಿಗಲಾರದೆ ಹೈರಾಣ ಆಗತ್ತಿತ್ತು. ಮುಂಜಾನೆ ತಿಂಡಿಗಿ ಅಂತ ಒಂದು “ಸಿಂಗಲ್ ಇಡ್ಲಿ ವಡಾ” ತಿಂದರೆ ಸಾಯಂಕಾಲತನಕ ಹಸಿವಿನೆ ಅಗ್ತಿರಲ್ಲಿಲ್ಲ, ಅದು ಅಲ್ದೆ ಈ “..ದರ್ಶಿನಿ” ಅನ್ನೊ ಹೋಟೆಲಗಳ ಸುದ್ದಿನೇ ಇರಲ್ಲಿಲ್ಲರಿ. ಆಮೇಲೆ ಎಲ್ಲದಕ್ಕಿಂತಾ ಮುಖ್ಯವಾಗಿ ಬಿ ಟಿ ಎಸ್ ಬಸನಾಗ್ ವಯಸ್ಸಾದವ್ರಿಗಿ, ಹೆಣ್ಣ ಮಕ್ಕಳಿಗಿ ಕೂಡ್ಲಿಕ್ಕಿ ಜಾಗ ಸಿಗಿತ್ತಿತ್ತು,

ಒಟ್ಟಿನಾಗ ಆಗ ಬೆಂಗಳೂರನಾಗ ಭಾಳ ಸುಭಿಕ್ಷಾ ಇತ್ತು.

ಅಂದಂಗ ನಾ ಹೇಳೋದು ಎಲ್ಲಾ ಕೇಳಿ, ಇವೆಲ್ಲಾ ಎಲ್ಲೋ ಕೆಂಪೇಗೌಡರ ಕಾಲದ ಸುದ್ದಿ ಅನ್ಕೊಂಡಿರೇನೋ? ಇಲ್ರಿ ಇದು ಒಂದ ಹದಿನೈದು ಇಲ್ಲಾ ಇಪ್ಪತ್ತು ವರ್ಷದ ಹಿಂದಿಂದು ಕಥಿ. ಆದ್ರ ಇದು ಕನ್ನಡಮ್ಮನ ಕಥಿ, ಬೆಂಗಳೂರಿನ ಕನ್ನಡಮ್ಮನ ಕಥಿ.

ಒಂದು ಸರ್ತಿ ನಮ್ಮ ಮಾಮಾ ಅಂದ್ರ ಭಾವ, ಪುಣೆಯಿಂದ ಯಾವುದೋ ಕೆಲಸದ ಮ್ಯಾಲ ಬೆಂಗಳೂರಿಗೆ ಬಂದರು. ಕೆಲಸೆಲ್ಲಾ ಆದ ಮೇಲೆ ವಾಪಸ್ಸ ಹೋಗಲಿಕ್ಕೆ ಇನ್ನಾ ಒಂದು ದಿವಸ ಉಳಿದ್ದಿತ್ತು, ಹಿಂಗಾಗಿ ಬೆಂಗಳೂರ ಸುತ್ತಾಡಕೊಂಡು ಬರಲಿಕ್ಕೆ ಇಬ್ಬರೂ ಹೊರಟ್ವಿ. ಮೊದಲು ಎಂ ಜಿ ರೋಡ್ ಹೋಗಿ ಅಲ್ಲಿ ತಿರುಗಾಡಿ, ಆಮೇಲೆ ಬರುವಾಗ ಮಲ್ಲೇಶ್ವರಂಗ ಒಂದು ಭೇಟಿ ಕೊಟ್ಟು ಅಲ್ಲಿಂದ ರಾಜಾಜಿನಗರಕ್ಕ ಬಂದು ಆಮೇಲೆ ನಂದಿನಿ ಲೇ ಔಟ್ ನೊಳಗ ಇರೋ ನಮ್ಮ ಮನಿಗೆ ವಾಪಸ್ಸು ಬರೋ ಕಾರ್ಯಕ್ರಮ ಹಾಕೊಂಡು ಹೊರಟೆವು. ಹಂಗೆ ಸುತ್ತಾಡಕೊಂಡು ಬ್ರಿಗೇಡ್ ರೋಡನಾಗ ರಂಗನಾಥ ಕೆಫೆ ಅಂತ ಒಂದು ಹೋಟೆಲ್ ಇತ್ತು, ಅಲ್ಲಿ ಕಾಫಿ ಕುಡಿಲಿಕ್ಕಿ ಒಳಗ ಹೊಕ್ಕೆವು. ಚಹಾ ಕುಡಿಯೋದಷ್ಟೇ ರೂಢಿ ಇದ್ದ ನನಗ ಇನ್ನಾ ಬೆಂಗಳೂರಿನ ಕಾಫಿ ರುಚಿ ನಾಲಿಗಿಗಿ ಹಿಡಿದರಲ್ಲಿಲ್ಲ. ಕಾಫಿ ಯಾಕೋ ಕಹಿ ಅನ್ನಸ್ತು, ಸ್ವಲ್ಪ ಸಕ್ಕರಿ ಹಾಕೊಂಡರ ಒಳ್ಳೇದು ಅನ್ಕೊಂಡು ಕಾಫಿ ತಂದು ಕೊಟ್ಟ ಹುಡುಗಂಗೆನೆ ಕರದು “ಸ್ವಲ್ಪ ಸಕ್ಕರೆ ಬೇಕು” ಅಂದೆ.

ಅವನು “ಶುಗರ ಬೇಕಾ ಸಾರ್?” ಅಂದ,

ನಾನು “ಹೂಂ” ಅಂದೆ.

ಸಕ್ಕರೆ ತಂದು ಕೊಟ್ಟ, ಚಮಚ ಇರಲ್ಲಿಲ್ಲ, “ಚಮಚಾ ಬೇಕು” ಅಂದೆ...

ಅವನು “ಸ್ಪೂನ್ ಬೇಕಾ ಸಾರ್?” ಅಂದ,

ನಾನು “ಹೂಂ” ಅಂದೆ. ಅವನು ಚಮಚಾನೂ ತಂದು ಕೊಟ್ಟ.

ನಾನು ಸ್ವಲ್ಪ ಸಕ್ಕರೆ ಹಾಕೊಂಡು, ಕಾಫಿ ಕುಡಿಯೋಕೆ ಶುರು ಮಾಡಿದೆ.

ಆಗ ಮಾಮ ನಕ್ಕೋತ “....ಅಂತೂ ನಿನಗ ಸಕ್ಕರಿ ಮತ್ತ ಚಮಚಾ ಸಿಗಿಲ್ಲಿಲ್ಲಾ ಅಲ್ಲಾ?”

"ಹೂಂನ್ರಿ ಮಾಮ...ಎಲ್ಲಾ ಅವರವರ ಅದೃಷ್ಟ” ಅಂತ ನಾ ಅಂದೆ.

ಹೋಟೆಲನಿಂದ ಹೊರಗ ಬಂದ್ವಿ, ಸ್ವಲ್ಪ ಹೊತ್ತು ತಿರುಗಾಡಿದ್ವಿ, ಅಲ್ಲೊಂದಿಷ್ಟು ಸಾಮಾನು ಖರೀದಿ ಆಯಿತು. ಎಂ ಜಿ ರೋಡ್ನಾಗ ಇರೋ ಬೃಂದಾವನ ಹೋಟೆಲ್ ಹೋದ್ವಿ, ಮತ್ತ ಕಾಫಿ ತರಿಸಿದ್ವಿ..ಮ್ಯಾಲ ಹೇಳಿದ ಮಾತುಕತಿ ಮತ್ತೊಂದು ಸರ್ತಿ ಆಯಿತು. ನಾ ಸಕ್ಕರಿ, ಚಮಚಾ ಕೇಳಿದೆ, ಕಾಫಿ ಕೊಟ್ಟ ಹುಡುಗ ಶುಗರ್ ಮತ್ತ ಸ್ಪೂನ್ ತಂದು ಕೊಟ್ಟ. ನಾನೂ ಮತ್ತ ಮಾಮ,ಇದನ್ನ ನೋಡಿ ನಕ್ಕೊತ ಕಾಫಿ ಕುಡುದ್ವಿ.


ಹೋಟೆಲನಿಂದ ಹೊರಗ ಬರೋವಾಗ ನನ್ನ ತಲಿಯೋಳಗ ಒಂದು ಅಧ್ಭುತ ಯೋಜನಾ ತಯಾರ ಆಯಿತು. ನಾನು ಮಾಮಗ ಹೇಳಿದೆ “ಮನಿಗೆ ವಾಪಸ್ಸ್ ಹೋಗೋತನಾ..ನಾವು ಎಲ್ಲೆಲ್ಲಿ ಹೋಗತಿವೋ ಅಲ್ಲಿ ಕಾಫಿ ಕುಡಿಯೋಣ” ಅಂದೆ

ಮಾಮ “ಯಾಕೋ?” ಅಂತ ಕೇಳಿದ್ದಕ್ಕ

“ಒಂದು ಪ್ರಯೋಗ ಮಾಡೋಣರೀ ಮಾಮ...ಇವತ್ತ ಬೆಂಗಳೂರಿನ ಯಾವ ಹೋಟೆಲನಾಗ ನನಗ ಸಕ್ಕರಿ ಮತ್ತ ಚಮಚಾ ಸಿಗ್ತಾವ ಅಂತ ನೋಡೋಣು” ಅಂತ ಅಂದೆ. ಮಾಮ ನಕ್ಕೋತ "....ಅಂತೂ ನಿನ್ನ ಹತ್ರ ಭಾಳ ಪುರೋಸೋತ್ತ ಅದ ಗೊತ್ತಾಯಿತು" ಅಂದ್ರು..

ಶುರು ಆಯಿತು ನಮ್ಮ ಪ್ರಯೋಗ, ಅದಕ್ಕೆ ಎಂ ಜಿ ರೋಡ, ಮಲ್ಲೇಶ್ವರಂ, ರಾಜಾಜಿನಗರದ ಹೋಟೆಲಗಳೇ ಗಿನಿಪಿಗ್ ಆದವು. ನಾವು ಅನಕೊಂಡಂಗ, ಯಾವ ಹೋಟೆಲನಾಗೂ ನನಗೆ “ಸಕ್ಕರೆ ಮತ್ತು ಚಮಚಾ” ಸಿಗಲೇ ಇಲ್ಲ.


ಮನೆಗೆ ಬಂದ ಮೇಲೆ, ಮಾಮಾ ನನಗೆ ಕೇಳಿದರು “ನಿನ್ನ ಪ್ರಯೋಗದ ಫಲಿತಾಂಶ, ಏನಂತದ”?

ಅದಕ್ಕೆ ನಾನು ಹೇಳಿದೆ.....

 “ ಎರಡು ಥರದ ಫಲಿಶಾಂಶ ಅವರೀ ಮಾಮಾ...ಅವು ಯಾವವು ಅಂದ್ರ...  ಮೊದಲೆನೆದು, ಜಾಸ್ತಿ ಕಾಫಿ ಕುಡುದ್ರ ಪಿತ್ಥ ಜಾಸ್ತಿ ಆಗದತ ನನ್ನ ಹೊಟ್ಟಿ ಅಂತ ಹೇಳತದ...  ಎರಡನೇದು ಬೆಂಗಳೂರನಾಗ ಕಳೆದು ಹೋಗಿರೋ ಕನ್ನಡ ನೋಡಿ ಮನಸ್ಸು ಮರಗತದ..”

ಮಾಮಾ “ಮುಂದ ಏನು?”...

ಅದಕ್ಕ ನಾನ ಅಂದೆ “ಇದರ ಬಗ್ಗೆ ಒಂದು ಸಂಶೋಧನಾ ಲೇಖನ ಬರಿತಿನ್ರಿ”...

“ಆಯಿತು ಹಂಗಂದ್ರ ಲಗೂನೇ ಬರೀ”

ಮುಂದ ಇಪ್ಪತ್ತು ವರ್ಷ ಆದ ಮೇಲೆ ನಾನು ಈ ಸಂಶೋಧನಾ ಲೇಖನ ಬರೆದೆ. ಇನ್ನಾ ಎಲ್ಲೂ ಪ್ರಕಟ ಆಗಿಲ್ಲ.


-------------------------------------------------------------------------------------

ಉಪಸಂಹಾರ


ಒಂದೂರಾಗ ಒಬ್ಬ ವಿಜ್ಞಾನಿ ಇದ್ದನಂತ.....

“ಮ್ ಅಮ್.. ವಿಜ್ಞಾನಿ ಅಂದ್ರ”?

“ವಿಜ್ಞಾನಿ ಅಂದ್ರ “ಸೈಂಟಿಸ್ಟ್”....ಅಂವನ ಹತ್ತಿರ ಭಾಳ ಪುರುಸೊತ್ತು ಇತ್ತಂತ... “

“ಮ್ ಅಮ್.. ಪುರುಸೊತ್ತು ಅಂದ್ರ”?

“ಪುರುಸೊತ್ತು ಅಂದ್ರ ಟೈಮ್..ಅವನ ಹತ್ರ ಭಾಳ ಟೈಮ್ ಇತ್ತಂತ...”

“ಹುಂ”

"ಅದಕ್ಕ ಅಂವ ಒಂದು ಕಪ್ಪಿ ಮ್ಯಾಲ ಪ್ರಯೋಗ ಮಾಡಬೇಕು ಅಂತ ಅನಕೊಂಡನಂತ".

“ಮ್ ಆಮ್ ....???”

"ಅಯ್ಯಪಾ....ಕಪ್ಪಿ ಅಂದ್ರ ಫ್ರಾಗ್...ಪ್ರಯೋಗ ಅಂದ್ರ ಎಕ್ಸಪಿರಿಮೆಂಟ...ಗೊತ್ತಾಯಿತಲ್ಲಾ ? ನೀ ಹಿಂಗ ಎಲ್ಲದಾಕು, ಅದು ಅಂದ್ರ.. ಇದು ಅಂದ್ರ ಅಂತ ಅರ್ಥ ಕೇಳಿದ್ರ ನಾ ಕಥಿ ಹ್ಯಾಂಗ ಹೇಳಲಿ...ಕಥಿ ಮುಗಿಯೋ ತನ ಸುಮ್ಮನ ಕೂತಿರು..ತಿಳೀತು"?

“ಹುಂ”

"....ಎಲ್ಲಿದ್ದೆ ನಾನು?..ಹಾಂ... ವಿಜ್ಞಾನಿ, ಕಪ್ಪಿ ಮ್ಯಾಲ ಪ್ರಯೋಗ ಮಾಡಬೇಕು ಅಂತ ಅನಕೊಂಡನಂತ...ಮೊದಲು ಕಪ್ಪಿಗಿ “ಜಿಗಿ” ಅಂತ ಅಂದಕೂಡಲೇ..ಜಿಗಿಯುವಂಗ ಹೇಳಿ ಕೊಟ್ಟನಂತ...

ವಿಜ್ಞಾನಿ “ಜಿಗಿ” ಅನ್ನೋದೇ ತಡ, ಕಪ್ಪಿ “ಟಣ್” ಅಂತ ಜಿಗಿತಿತ್ತಂತ...

ಸ್ವಲ್ಪ ದಿವಸ ಆದ ಆಮೇಲೆ ಕಪ್ಪಿದು ಮುಂದಿನ ಎರಡೂ ಕಾಲ ಕತ್ತರಿಸಿ, “ಜಿಗಿ” ಅಂತ ಅಂದನಂತ, ಕಪ್ಪಿ ಕಷ್ಟಾ ಪಟ್ಟು ಹಿಂದಿನ ಎರಡೂ ಕಾಲಲ್ಲಿನೇ ಜಿಗಿತಂತ....

ಆಮೇಲೆ ವಿಜ್ಞಾನಿ ಕಪ್ಪಿದು ಹಿಂದಿಂದೂ ಎರಡೂ ಕಾಲ ಕತ್ತಿರಿಸಿ “ಜಿಗಿ” ಅಂದನಂತ...ಕಪ್ಪಿ ಜಿಗಿಲ್ಲಿಲ್ಲಂತ...

ಅದಕ ವಿಜ್ಞಾನಿ ತನ್ನ ಸಂಶೋಧನಾ ಲೇಖನದೊಳಗ, “ಕಪ್ಪಿಗಿ ಹಿಂದಿನ ಕಾಲು ಇರಲ್ಲಿಲ್ಲ ಅಂದ್ರ...ಅದಕ ಕಿವಿ ಕೇಳಸಂಗಿಲ್ಲಾ” ಅಂತ ಬರಕೊಂಡನಂತ.....

".........."

"ಹ್ಯಾಂಗದ ಕಥಿ....ಯಾಕೋ ನೀ ನಗಲೇ ಇಲ್ಲಲ್ಲೋ..? “ಜೋಕ್” ಅರ್ಥ ಆಗ್ಲಿಲ್ಲಾ? ....ಹೋಗ್ಲಿ ಬಿಡು...."

ಮಂಗಳವಾರ, ಡಿಸೆಂಬರ್ 25, 2012

ಮದುವೆಯ ಅನುಬಂಧಾ....


 ಮದುವೆಯ ಅನುಬಂಧಾ....

- ಗುರುರಾಜ ಕುಲಕರ್ಣಿ (ನಾಡಗೌಡ)

“ಮದುವೆಗಳು ಸ್ವರ್ಗದಾಗ ನಡಿತಾವ”, ಅನ್ನೋದು ಪಾಶ್ಚಿಮಾತ್ಯರ ನಂಬಿಕೆ. ಗಂಡ-ಹೆಂಡತಿ ಸಂಬಂಧ ಏಳೇಳು ಜನ್ಮದ ಸಂಬಂಧ ಅಂತ ನಾವು ಸನಾತನಿಗಳು ನಂಬೊ ಮಾತು.

ಅದ್ರೂನು ಈ ಮದುವಿ ಅನ್ನೊ ಸಿಸ್ಟಮ್ ಹ್ಯಾಂಗ ಕೆಲಸ ಮಾಡ್ತದ ಅನ್ನೊದು, ಇಡೀ ಯುನಿವರ್ಸ ಸೃಷ್ಟಿ ಮಾಡಿರೋ ಪರಬ್ರಹ್ಮಗೂ ತಿಳಿಲಾರ್ದದ ಮಾತು ಇರಬೇಕು ಅಂತ ನನ್ನ ಅಭಿಪ್ರಾಯ. ಅಲ್ಲಾ ನೀವೆ ಸ್ವಲ್ಪ ಸುತ್ತ-ಮುತ್ತ ಕಣ್ಣಾಡಿಸಿ ನೋಡ್ರಿ, ಆಜುಬಾಜುನವರು ತಮ್ಮ ಸಂಸಾರಗೊಳು ಹ್ಯಾಂಗ ತೂಗಿಸಿಕೊಂಡು ಹೊಗ್ತಾರ ಅಂತ...ಎಂಥಾ ನಾಸ್ತಿಕನಿಗೂ ದೇವರ ಮ್ಯಾಲ ನಂಬುಕೆ ಹುಟ್ಟಲ್ಲಿಲ್ಲಾ ಅಂದ್ರ ..ನನಗ ನೀವು ಕೇಳ್ರಿ...

...ಆಮ್ಯಾಲೆ ಇನ್ನೊಂದು ಮಾತು..ಆಜುಬಾಜು ಸಂಸಾರ ಮಾತ್ರ ನೊಡ್ರಿ...ನಿಮ್ಮ ನಿಮ್ಮ ಸಂಸಾರ ನೋಡಕೊ ಬ್ಯಾಡ್ರಿ....ಅದರ ಮುಂದಿನ ಜವಾಬ್ದಾರಿ ನಂದಲ್ಲಾ....ಏನ್ರೆಪಾ?

ಮದುವೆ ಅಂತ ಅಂದ ಕೂಡ್ಲೇ ನನಗ, ಸುಮಾರು ೧೯೯೯ರ ಸುಮಾರು ನಾವು (ಮತ್ತ್ಯಾರು....?... ನಾನು ನನ್ನ ಹೆಂಡತಿ ಪಲ್ಲವಿ) ಆಮೇರಿಕಾದಾಗ ಇದ್ದಾಗ, ಅದರ ಬಗ್ಗೆ ನಡಿತ್ತಿದ್ದ ಮಾತು-ಕಥಿ ನೆನಪಾಗ್ತದ.

ಆ ಟೈಮ್ನಾಗ ಕಂಪ್ಯೂಟರ್ ಕೀ ಬೋರ್ಡ್ ಗೊತ್ತಿದ್ದವರಿಗೆಲ್ಲಾ, ನ್ಯೂಯಾರ್ಕ್ ಸ್ವಾತಂತ್ರ್ಯ ದೇವತೆ ಕೈ ಬೀಸಿ ಕರಿತ್ತಿದ್ದಳು. ಹಿಂಡ ಹಿಂಡಗಟ್ಟಲೆ ಕಾಲೇಜ್ ಮುಗಿಸಿದ ಹುಡುಗರು ನೌಕರಿಗಿ ಹೋಗತ್ತಿದ್ದರು ಮತ್ತ ವರ್ಷ ಕಳಿದರೊಳಗ ವಾಪಸ್ಸ್ ತಮ್ಮ ತಮ್ಮ ಊರಿಗಿ ಬಂದು ಮದುವಿ ಮಾಡಕೊಂಡು ಆಮೇರಿಕಾಕ್ಕ ಹೆಂಡತಿ ಜೊಡಿ ಕುಕ್ಕರನೂ ತೊಗೊಂಡು ಬರ್ತಿದ್ದರು. ಈ ಭಾರತದದ ಹುಡುಗರು ಮಾಡಕೊಳೊ ಮದುವಿ ಕಾರ್ಯಕ್ರಮ ಅಲ್ಲಿ ಮಂದಿಗಿ ಭಾಳಾ ಆಶ್ಚರ್ಯ ತರಿಸೊದು.

ಅಲ್ರಿ ತಿಂಗಳಾನಾಗ ಹುಡುಗಿನ ಹುಡ್ಕೊಂಡು..ಮದುವಿನೂ ಮಾಡ್ಕೊಂಡು..ಬಂದು ಬಿಡ್ತಿರಲ್ಲಾ...ಇದು ಹ್ಯಾಂಗ..? ಅಂತ ಹುಬ್ಬ ಮತ್ತ ಗೋಣ ಹಾರ್ಸೊಕೊತ ನಮ್ಮಂತೊರಿಗಿ ಕೇಳೊರು.

ನಮಗ ಸಿಕ್ಕಿದೆ ಛಾನ್ಸ್ ಅಂತ ನಮ್ಮ ಪರಂಪರಾ..ನಮ್ಮ ಸಂಸ್ಕೃತಿ ಬಗ್ಗೆ.... , ತಲಿ ಮ್ಯಾಲ ಕೋಡು ಇಟ್ಕೊಂಡು, ಎದಿ ಉಬ್ಬಸ್ಕೊಂಡು ಉತ್ತರಾ ಹೇಳಿದ್ದೆ ಹೇಳಿದ್ದು...ಅವರು ಬಿಟ್ಟ ಕಣ್ಣ ಬಿಟ್ಟಕೊಂಡು ಕೇಳಿದ್ದೆ ಕೇಳಿದ್ದು...

ಈಗ ಟೈಮ್ ಬದ್ಲಾಗ್ಯದ. ಜಗತ್ತಾನಗ ಎಲ್ಲಾರಿಗೂ..ನಮ್ಮ "ಪರಂಪರಾ".."ಪರಾಕ್ರಮ"..ಗೊತ್ತಾಗೆದ.

ಆದ್ರ ಈಗ ನಾ ಹೇಳು ಖರೆ ಖರೆ ಘಟನಾಗೊಳು ಕೇಳಿದ ಮ್ಯಾಲ...ಮದುವಿ ಹೀಂಗೂ ನಡಿತಾವಾ? ಅಂತ ನಿಮಗೂ ಅನ್ನಸ್ಲಿಲ್ಲಾ ಅಂದ್ರ..ನನಗ ಕೇಳ್ರಿ..

ಮದುವೆ ಅನುಬಂಧ ೧


ಇದು ನಡೆದ್ದದ್ದು, ಸುಮಾರು ೩೦-೩೫ ವರ್ಷದ ಹಿಂದೆ. "ವರ" ನಮ್ಮೂರ ಹತ್ತರ ಹಳ್ಳಿಯವರು. ಕೆಲಸ ಬೆಂಗಳೂರನಾಗ.. ಉತ್ತರ ಕರ್ನಾಟಕದ ನಮ್ಮ ಮಂದಿಗಿ, ಬೆಂಗಳೂರನಾಗ ಕೆಲಸ ಮಾಡೊದು ಒಂದೇ.. Onsite ನಾಗ ಕೆಲಸ ಮಾಡೊದು ಒಂದೇ.

ಆ ಕಾಲದಾಗ ನಮಗ ಬೆಂಗಳೂರ ನಿಲುಕದ ನಕ್ಷತ್ರ, ಯಾಕಂದ್ರ ಬೆಂಗಳೂರಿಗೆ ಹೊಗಲಿಕ್ಕಿ ಬಸ್, ಟ್ರೈನ್, ಇಲ್ಲಾ ಒಂದು ಸರಳ ರೋಡ್ನೂ ಇರಲ್ಲಿಲ್ಲ. ಹೀಂಗಾಂಗಿ ಈ ಹುಡುಗ ಬೆಂಗಳೂರನಾಗ ಒಬ್ಬನೇ ಪರದೇಶಿಯಂಗ ಇದ್ದ.

ಒಬ್ಬನೇ ಇದ್ದನಾ..? ಹೀಂಗಾಗಿ, ವಯಸ್ಸಿಗೆ ತಕ್ಕಂತೆ...ದಿನಕ್ಕೆ ಒಂದ ನಾಲ್ಕು ಜ಼ುರುಕಿ ಹೋಡಿಯೊದು, ಆವಾಗಾವಗ ತಣ್ಣಗಂದು ಮಲ್ಲ್ಯ ಸ್ಪೇಶಿಯಲ್ ಕುಡಿಯೊದು ಮಾಡ್ತಿದ್ದ..ಇಂಥಾ ಸುದ್ದಿ ಮನ್ಯಾಗಿನ ಹಿರ್ಯಾರಿಗಿ ಮುಟ್ಟಿಸಲ್ಲಿಕ್ಕಿಂತಾನೇ ಇರೋರು, ಸ್ವಲ್ಪ ಹೆಚ್ಚಿಗೆ ಖಾರ ಉಪ್ಪ ಹಚ್ಚಿ, ಊರಾಗಿರೊ ಈ ಹುಡುಗನ ಅಣ್ಣಗ ಹೇಳಿದರು. ಅಪ್ಪ-ಅಮ್ಮ ಇಲ್ಲದ ಈ ಹುಡುಗಗ, ಹಿರಿ ಅಣ್ಣನೇ ಎಲ್ಲಾ. ಅಣ್ಣನ ಪ್ರಕಾರ ಇವನಿಗೊಂದು ಮದುವಿ ಮಾಡಿದ್ರ ಎಲ್ಲಾ ಸರಿ ಹೊಗ್ತಾನ ಅಂತ..ಮದುವಿ ಮಾಡ್ಲಿಕ್ಕಿ ನಿಶ್ಚಯ ಮಾಡಿದ್ರು.

ಈ ಕಡೇ ಬೆಂಗಳೂರನಾಗ, ಮುಂಜಾನೆ ನೌಕರಿಗಿ ಹೊಗಲಿಕ್ಕಿ ತಯಾರಿ ನಡಿಸಿದ್ದ ಹುಡುಗನಿಗೆ, ಊರಿಂದ ಕಾರ್ಡ (ಪತ್ರ- ೧೫ ಪೈಸಾದ್ದು) ಬಂತು.


ಅಣ್ಣ ಪತ್ರ ಬರದ್ದಿದ್ದರು.



ಚಿ|| "ಹುಡುಗನ ಹೆಸರು"

ನಿನ್ನ ಹಿರಿಯ ಅಣ್ಣ ಮಾಡು ಆಶೀರ್ವಾದಗಳು,

ಇತ್ತ ಸಕಲವೂ ಕುಶಲ. ನಾವೆಲ್ಲರೂ ಕ್ಷೇಮವಾಗಿದ್ದೇವೆ. ನಿನ್ನ ಕ್ಷೇಮ ಸಮಚಾರ ತಿಳಿಸುತ್ತ ಇರಬೇಕು. ನಿನ್ನ ಆರೋಗ್ಯದ ಕಡೆ ಗಮನವಿರಲಿ.ಮಳೆ ಸಮಯಕ್ಕ ಸರಿಯಾಗಿ ಆಗಿದ್ದು, ಬಿತ್ತನೆ ಕೆಲ್ಸ ಚೆನ್ನಾಗಿ ನಡೆದಿದೆ. ಕೆರೆಯ ಬಾಜು ಇರುವ ಹೊಲದಲ್ಲಿ ಈ ಬಾರಿ ಶೇಂಗಾ ಹಾಕುವ ಯೋಚನೆ ಇದೆ. ಅಮಲ್ದಾರ ಮಾಮನ ಮಗಳಿಗೆ ಗಂಡು ಮಗು ಹುಟ್ಟಿದೆ. ತಾಯಿ ಮತ್ತು ಮಗು ಇಬ್ಬರೂ ಆರಾಮಾವಾಗಿ ಇದ್ದಾರೆ. ಬಾಳಣ್ಣನ ಮಗ ಬಿಜಾಪುರದಲ್ಲಿ ಐ ಟಿ ಐ ಕಾಲೇಜ ಸೇರಿದ್ದಾನೆ.

ಬರುವ ೧೭ ತಾರೀಖಿಗೆ ನಿನ್ನ ಮದುವೆ ತೇರದಾಳ ಸಂಗಮೇಶ್ವರ ಗುಡಿಯಲ್ಲಿ ನಡೆಸಲು ನಿಶ್ಚಯಲಿಸಲಾಗಿದೆ. ತಪ್ಪದೆ ಬರಬೇಕು.


ಇತಿ ಆಶೀರ್ವಾದಗಳೊಂದಿಗೆ.



ಕಡಿ ವಾಕ್ಯಕ್ಕ ಜಾಗ ಸಾಕಾಗಲಾರ್ದಕ್ಕ, ಹ್ಯಾಂಗ ಹ್ಯಾಂಗೋ ಬರದಿದ್ದರು. ಇವನು ಕಷ್ಟ ಪಟ್ಟು ಓದಿ ಅರ್ಥ ಮಾಡ್ಕೊಳ್ಳಿಕ್ಕಿ ನಾಲ್ಕು ನಾಲ್ಕು ಸರ್ತಿ ಓದಿದ ಪತ್ರ ಓದ್ದಿದ್ದೇ ತಡ...ಹುಡುಗ ಆಫೀಸಿಗೆ ಓಡಿದ...ಹೆಡ ಕ್ಲರ್ಕ ಹತ್ರ ಕಾಡಿ ಬೇಡಿ ರಜಾ ಹಾಕಿದ.. ಪತ್ರದಾಗ ಬರದ್ದಿದ್ದ ಪ್ರಕಾರ ೧೭ ತಾರೀಖಿಗಿ ಊರಿಗೆ ಹೋಗಿ ಮದುವಿ ಆದ.. ಇದನ್ನ ಭಾತೃ ಪ್ರೇಮ ಅಂತಿರೊ..ಅಥವಾ ಆವಾಗಿನ ರೀತಿ ರೀವಾಜ಼್ ಅಂತಿರೊ.. ಅಂತು ಮದುವಿ ಮಾಡ್ಕೊಂಡ್ರು, ಸಂಸಾರನೂ ನಡಿಸಿದ್ರು.

ಇದನ್ನ ಖುದ್ದು ಆ "ಹುಡುಗ".. ತಮ್ಮದೇ ಮಗನ ಮದುವಿ ದಿವ್ಸ ನಮಗೆಲ್ಲಾ ಹೇಳಿದ್ರು. ನಾನು ಬಿಟ್ಟ ಕಣ್ಣ ಬಿಟ್ಟಕೊಂಡು ಈ ಮದುವಿ ಕಥಿ ಕೇಳಿದೆ.ಕಡೀಕ ತಡಿಲಾರ್ದೆ ಒಂದು ಮಾತು ಕೇಳಿದೆ..

"ಅಲ್ರಿ ಕಾಕಾ..ಆ ಕಾರ್ಡ ನಿಮಗ ಮುಟ್ಟಿರದ್ದಿದ್ದರ...ಇಲ್ಲಾ…. ನೀವು ಒಲ್ಲೆ ಅಂದ್ರಿದ್ರ..."

ಅದಕ ಅವರು ನಕ್ಕೊತ ಅಂದ್ರು

"ನಾ ಲಗ್ನಕ್ಕ ಹೋಗ್ಲಿ... ಹೋಗಲಾರದೆ ಇರ್ಲಿ.... ನಂದು ಲಗ್ನ ಅಂತೂ ಆಗಿರ್ತಿತ್ತು..ಹೆಂಡತಿ ಮನಿಗಿ ಬಂದಿರ್ತಿದ್ದಲು"

ನಾನು ತಗದ ಬಾಯಿ ಒಂದಃತ್ತು ನಿಮಿಷ ಆದ ಮ್ಯಾಲ ಮುಚ್ಚಿದೆ.

ಇದು ಹಳೆ ಕಥಿ ಆಯಿತು ಬಿಡ್ರಿ..ಈಗೆಲ್ಲಾ ಹೀಂಗ ಹ್ಯಾಂಗ ಆಗ್ತದ ಅಂತಿರೇನೊ? ಆದ್ರ ಇದಕ್ಕಿಂತಾ ಮಜಾ ಕಥಿ ಇಲ್ಲಿ ಕೇಳ್ರಿ..

ಮದುವೆ ಅನುಬಂಧ ೨


ನನ್ನ ಜೋಡಿ ಕೆಲಸ ಮಾಡ್ತಿದ್ದ ಹುಡುಗ ಒಬ್ಬ ಉಡುಪಿ ಕಡೆಯಾಂವ. ಭಾಳ ಚೊಲೊ ಹುಡುಗ..ಸ್ವಲ್ಪ ಭೊಳೆ ಬ್ಯಾರೆ. ವಯಸ್ಸಿಗೆ ತಕ್ಕಂಗ ಮದುವೆ ಮಾಡೊಕೊಳೊ ತಯಾರಿ ನಡದಿತ್ತು. ಎರಡ ದಿವ್ಸ ರಜಾ ಬೇಕ್ರಿ...ಊರಿಗಿ ಹೋಗಿ ಹುಡುಗಿನ ನೋಡ್ಕೊಂಡು ಬರ್ತೀನಿ ಅಂದ..ರಜಾ ಕೊಟ್ಟೆ ಊರಿಗೆ ಹೋಗಿ ಬಂದ.

ಮಧ್ಯಾನ್ಹ ಖಾಲಿ ಸಿಕ್ಕಾಗ...ಸಾಂಧರ್ಬಿಕವಾಗಿ "ಹುಡಿಗಿದು ಎಲ್ಲಿಗಿ ಬಂತು?" ಅಂತ ಕೇಳಿದೆ. ಉಡುಪಿ ಗ್ರಾಂಥಿಕ ಭಾಷಾದಳೊಗ "ನಮ್ಮ ಮನೆಯವರಿಗೆ ಸ್ವಲ್ಪವೂ ಬುದ್ಧಿ ಇಲ್ಲ " ಅಂದ. ಓಹ್ ಬಹುಶಃ ಮನೆಯವ್ರು ಒಲ್ಲದ ಮದುವಿಗಿ ಫ಼ೊರ್ಸ್ ಮಾಡ್ತಿರಬೇಕು ಅನ್ಕೊಂಡೆ. "ಯಾಕೆ ಏನ ಅಯಿತು?" ಅಂದೆ. ಅರ್ಧ ಘಂಟೆ (ಒಂದ ನೂರಾ ಹನ್ನೆರಡು ಪ್ರಶ್ನೆ) ಆದ ಮೇಲೆ ನನಗೆ ಗೊತ್ತಾಗಿದ್ದು ಇಷ್ಟು:

ಇವನು, ತಮ್ಮ ಅಪ್ಪಾ, ಅಮ್ಮಾ ಮತ್ತೊಂದಿಬ್ಬರ ಜೋಡಿ ಹುಡುಗಿನ ನೋಡ್ಲಿಕ್ಕಿ ಅವರ ಮನಿಗಿ ಹೊಗ್ಯಾರ. ಮಾಮೂಲಿನಂಗ ಕೇಸರಿಭಾತು, ಉಪ್ಪಿಟ್ಟನಂತಾದ್ದು ಏನೊ ಆಗ್ಯೇದ. ಹುಡಿಗಿನ ನೊಡ್ಯಾರ..ಆ ಹುಡುಗಿ ನೋಡ್ಲಿಕ್ಕಿ ತುಸು ಜಾಸ್ತಿನೇ ದಪ್ಪ ಇದ್ದಾಳ..ಮತ್ತ ಓದಿದ್ದು ಕಮ್ಮಿ...ಹಿಂಗಾಂಗಿ..ಮನಿಗಿ ಬಂದ ಮ್ಯಾಲ ಹುಡಿಗಿ ನಮಗ ಒಪ್ಪಿಗಿ ಇಲ್ಲಾ ಅಂತಾ ತಿಳಿಸು ನಿರ್ಧಾರಕ್ಕ ಬಂದಾರ ..ಇಲ್ಲಿ ತನಕ ಎಲ್ಲಾ ಮಾಮೂಲಿನೇ ಹೌದಿಲ್ಲೊ?...ಮುಂದ ಕೇಳ್ರಿ.... ನಮ್ಮ ಹುಡುಗ ಮಾತ್ರ ಇಲ್ಲಾ ಆ ಹುಡುಗಿನೇ ಮದುವೆ ಆಗೊದು ಅಂತ ಹಟ ಹಿಡದಾನ. ಅವರ ಅಪ್ಪ ಕಾಲಲ್ಲಿರೋ ಚಪ್ಪಲಿ ಕೈಗೆ ತೊಗೊಂಡ್ರ.. ಇವನ ಅಮ್ಮ ತಮ್ಮ ಯಜಮಾನರಿಗೆ ಸಮಾಧಾನ ಮಾಡಿ, ನಮ್ಮ ಹುಡುಗನ್ನ "ಯಾಕೊ..?" ಅಂತ ಕೇಳ್ಯಾರ. ಅದಕ್ಕ ಇವನು "ಅಲ್ಲಾ ಅವರ ಮನೆಗೆ ಹೋಗಿ ಕಾಫಿ ತಿಂಡಿ ತಿಂದಬಿಟ್ಟು ನೀವು ಈಗ ಹುಡುಗಿ ಒಪ್ಪಿಗೆ ಇಲ್ಲಾ ಅಂತಾ ಹ್ಯಾಗ ಹೇಳ್ತಿರಾ? ಅವರ ಮನಸ್ಸಿಗಿ ಬೇಜಾರ ಆಗೊಲ್ವ" ಅಂತ ವಾದ ಹಾಕಿದ್ನಂತ. ಕೊನಿಗಿ ಆ ಹುಡಿಗಿ ಅಪ್ಪನೇ..ಬೇಜಾರ ಮಾಡ್ಕೊಳಂಗಿಲ್ಲಾ ಅಂತ ಹೇಳಿ...ಇವನ್ನ ಬೆಂಗಳೂರಿಗಿ ಕಳಿಸಿದರಂತ.

ಈಗ ಆ ಹುಡುಗ (ಬ್ಯಾರೆ ಹುಡಿಗಿನ) ಮದುವಿ ಮಾಡ್ಕೊಂಡು..ಒಂದು ಮಗುವಿನ ತಂದೆ ಆಗ್ಯಾನ. ಇವನ್ನ ಮದುವಿ ಮಾಡ್ಕೊಂಡ ಆ ಹುಡುಗಿ ಜವಾಬ್ದರಿ ಎಷ್ಟು ಅಂತ ನನಗೂ ಗೊತ್ತದ.

ಮದುವೆ ಅನುಭಂದ ೩


ಮುಟ್ಟಿದ್ದಕ್ಕ ಮೂರು ಅನ್ನೋವಂಗ, ಇನ್ನೊಂದು ಮಜುಕೂರ ಕಥಿ ಹೇಳಿ ಮಂಗಳ ಹಾಡ್ತೀನಿ.

ನಮ್ಮ ಗುಲ್ಬರ್ಗಾದ ಹುಡುಗಂಗ ಬೆಂಗಳೂರನಾಗ “ಕಂಪ್ಯೂಟರ್ ನೌಕರಿ” ಸಿಕ್ಕತು.

ನೌಕರಿ ಸಿಕ್ಕಿದ್ದೇ ತಡ ಆಕಾಶದಿಂದ ಪುಷ್ಪವೃಷ್ಟಿ ಆದವು, ದೇವಾನು-ದೇವತೆಗಳು ಉಘೆ ಉಘೆ ಅಂದರು, ಗಂಧರ್ವರು ಕಿಂಪುರುಷರು ಮಂಗಳ ವಾದ್ಯಗಳನ್ನು ನುಡಿಸಿದರು.ಗಾಳಿಯೊಳಗ ಕಂಪು ಸೇರಿತು, ಶರಣ ಬಸಪ್ಪನ ಗುಡಿಯೊಳಗ ಘಂಟೆಗಳು ಬಾರಿಸಿದ್ವು. ಅಮ್ಮ-ಆಪ್ಪ ಹಣಮಪ್ಪಗ, ಮನಿದೇವರಿಗಿ, ರಾಯರಿಗಿ ನೈವೇದ್ಯ ಅಭಿಷೇಕ ಮಾಡಿಸಿದರು. ಮಗ ಇನ್ನ ಬೆಂಗಳೂರನಾಗ ಒಬ್ಬನೇ ಇರ್ತಾನಲ್ಲ ಕಾಳಜಿ ಮಾಡಿದ್ರು, ಗೆಳೆಯಂದ್ರು, “ಕಳ್ಳ ನನ್ ಮಗ ಉದ್ಧಾರ ಆದ” ಅಂದ್ರು. ಈ ನಮ್ಮ ಹುಡುಗ ಊರಾಗ ಸ್ಲೋ ಮೊಶನನೊಳಗ ತಿರಗಾಡಲಿಕ್ಕತ್ತಿದ.

ಬೆಂಗಳೂರಿಗೆ ಹೋಗೋ ತಯಾರಿ ಶುರು ಆಯಿತು. ಸ್ಟೇಶನಗೆ ಬಂದರಷ್ಟೇ ಮಂದೀನ, ಬೆಂಗಳೂರಿಗಿ ಕರ್ಕೊಂಡು ಹೋಗೋ “ಉದ್ಯಾನ ಎಕ್ಸಪ್ರೆಸ್” ರೈಲ, ಇವನ್ನ ಕರ್ಕೊಂಡ್ ಹೋಗಲ್ಲಿಕ್ಕಿ ಮನಿತನ ಬಂತು. ಬೆಂಗಳೂರ ಮುಟ್ಟುತನ ಜೋಗಳ ಹಾಡಿ, ಜತನಲೇ ಒಯ್ದು ಮುಟ್ಟಿಸಿತು.

ನಮ್ಮೂರ ಕಡೆಯಿಂದ ಬೆಂಗಳೂರಿಗೆ ಬರೋ ಎಲ್ಲಾ ಹುಡುಗರಂಗ ಇವನೂ ವಿಜಯನಗರದಾಗ ನಾಲ್ಕು ಹುಡುಗರು ಜೋಡಿ “ಬ್ಯಾಚುಲರ್ಸ್ ಮನಿ” ಮಾಡಿದ.

ಇದೆಲ್ಲಾ ಆದ ಮುಂದ ಒಂದ ವರ್ಷ-ಎರಡೋರ್ಷಕ್ಕ ಮನ್ಯಾಗ ಮದುವಿ ಮಾಡಿಬಿಡೋಣು ಅಂತ ಅಪ್ಪ-ಅಮ್ಮ ನಿರ್ಧಾರಕ್ಕ ಬಂದರು. ಅಲ್ಲಿಯಿಂದ ನಮ್ಮ ಕಥಿ ಶುರು,

ಮದುವಿ ಮಾತುಕತೆ ಶುರು ಆದ ಕೂಡ್ಲೇ, ಈ ಹುಡುಗಂಗ ಕನ್ನಡಿಯೊಳಗ ಹೃತಿಕ್, ಶಾರುಕ್, ಮತ್ತ ಸಲ್ಮಾನ್ ಕಾಣಸಕೊಳ್ಳಿಕ್ಕಿತ್ತರು. ಅಷ್ಟೇ ಇದ್ದರ ನಡಿತಿತ್ತು, ಆದರ ಕನ್ನಡಿ ಮುಂದ ನಿಂತುಕೊಂಡರ ಹೃತಿಕ ಇಲ್ಲಾ ಶಾರುಕನ ಜೋಡಿ ಲೈನನಾಗ ಹೀರೋಯಿನ್ ಸೈತ ನಿಂತ್ಕೋಳ್ಳಿಕತ್ತರು. ಹುಡುಗ ಹಗಲಗನಸ ಕಾಣಲ್ಲಿಕ್ಕತ್ತದ.

ಅಪ್ಪಂಗ ಊರ ಕಡೆ ಒಳ್ಳೆ ಹೆಸರು ಇತ್ತು, ಅಮ್ಮ ಮಹಿಳಾ ಮಂಡಲ, ಅರಿಷಣ ಕುಂಕಮ ಅಂತಾ ಓಡಾಡತಿದ್ದರು, ಹಿಂಗಾಗಿ ಹುಡುಗೀರ ಜಾತಕ ತೊಂಗೊಂಡು ಹಿರಿಯರು ಬರ್ಲಿಕ್ಕತ್ತಿದ್ದರು. ಅಪ್ಪ-ಅಮ್ಮ ಶನಿವಾರ ಇಲ್ಲಾ ರವಿವಾರ “ಕನ್ಯಾ ನೋಡು” ಕಾರ್ಯಕ್ರಮ ಇಟ್ಕೊತ್ತಿದ್ದರು, ಈ ಹುಡುಗ ಶುಕ್ರವಾರ ರಾತ್ರಿ ಉದ್ಯಾನ ಎಕ್ಸಪ್ರೆಸ್ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ರವಿವಾರ ರಾತ್ರಿ ಮತ್ತ ಬೆಂಗಳೂರಿಗೆ ವಾಪಸ ಬರ್ತಿದ್ದ. ನೋಡಿದ ಹುಡುಗಿರನೆಲ್ಲಾ ಬ್ಯಾಡ ಅಂತ ಹೇಳಿ ರೈಲ ಹತ್ತಿದ್ದ. ಅಪ್ಪ ಅಮ್ಮ ಮುಂದಿನ ವಾರದ್ದು ತಯಾರಿ ಮಾಡ್ಕೊಳಿಕ್ಕಿ ಶುರು ಮಾಡ್ತಿದ್ದರು. ಹೀಂಗೆ ಆರ ತಿಂಗಳು ಕಳದ್ವು. ಊರಾಗ, ಇವರ ಅಪ್ಪ –ಅಮ್ಮನ ಹೆಸರು “ಒಳ್ಳೆಯವರು” ಅನ್ನೋ ಲಿಸ್ಟನಾಂದು ತೆಗದರು. ಅಪ್ಪ ಅಮ್ಮಂಗ ಚಿಂತಿ ಶುರು ಆಯಿತು.

ಮುಂದ ಒಂದು ಶನಿವಾರ, ಮಾಮೂಲಿನಿಂಗ ನಮ್ಮ ಹುಡುಗ “ಕನ್ಯಾ ನೋಡು” ಕಾರ್ಯಕ್ರಮಕ್ಕ ಹಾಜರ ಆದ. ಬಂದ ಕೂಡ್ಲೇ ಈ ಸರ್ತಿ ಯಾಕೋ ಮಾಹೋಲ್ ಸರಿ ಇಲ್ಲ ಅಂತ ಅನ್ನಸ್ತು. ಮನ್ಯಾಗ ಅಡಗಿಯವನ್ನ ಕರಿಸಿದ್ದರು, ಸೋಮವಾರಕ್ಕ ಅಡುಗಿಗೆ ಏನೇನು ಬೇಕು ಅಂತ ಲಿಸ್ಟ ತಯಾರಿ ನಡಿದ್ದಿತ್ತು. ಅಪ್ಪ ಕೂತು ಯಾರ್ಯಾರನ್ನ ಕರಿಬೇಕು ಅಂತ ಲಿಸ್ಟ ಮಾಡ್ಲಿಕ್ಕತ್ತಿದ್ದರು. ಹುಡುಗ ಶ್ಯಾಣೆ, ಏನೋ ಗಡಬಡ ಅದ ಅಂತ ಗೂತ್ತಾಯಿತು. ಅಮ್ಮ ಚಹಾದ ಕಪ್ಪ ಕೈಯಾಗಿ ಇಟ್ಟು, “’ಹಾಲ’ನಾಗಿನ ಟೇಬಲ್ ಮ್ಯಾಲ ಹುಡುಗಿ ಫೋಟೋ ಇಟ್ಟದ ನೋಡು” ಅಂದರು. ಇಂವ ಹೋಗಿ ಫೋಟೋ ನೋಡಿದ. ಅಲ್ಲೇ ಕೂತ್ತಿದ್ದ ಅಪ್ಪನ ಮಾರಿ ನೋಡಿದ,

ಅಪ್ಪ ಹುಡುಗಂಗ ಹೇಳಿದರು

“ನಾವೆಲ್ಲಾ ಹುಡುಗಿನ ನೋಡಿವಿ..ಛಂದ ಇದ್ದಾಳ..ಮೂಗ ಕಣ್ಣ ಎಲ್ಲಾ ಬರೋಬರಿ ಅವ...ಸೋಮವಾರ ನಿಂದು ನಿಶ್ಚಾ (Engagement) ಮಾಡಿತಿವಿ “

ಹುಡುಗಂಗ ಇನ್ನೇನ ಹೇಳಬೇಕು ಗೊತ್ತಾಗಲ್ಲಿಲ್ಲ ಸಾವಕಾಶ ಗಂಟಲು ಕೆರ್ಕೊಂಡು “ನಾ ಸೋಮವಾರ ರಜಾ ತೊಗೊಂಡಿಲ್ಲಾ ನಮ್ಮ ಮ್ಯಾನೇಜರಗ ಹೇಳಿಲ್ಲ” ಅಂತಂದ.

ಅವರ ಅಪ್ಪ “ಹೌದ? ನಿಮ್ಮ ಮ್ಯಾನೇಜರಗ ಫೋನ ಮಾಡು, ನಂದು ನಿಶ್ಚಾ ಅದರಿ..ಅದಕ ಸೋಮವಾರ ರಜಾ ಕೊಡ್ರಿ ಅಂತ ಹೇಳು...ಇಲ್ಲಾ ಅವಂದು ಫೋನ ನಂಬರ್ ಕೊಡು ನಾನೇ ಮಾತಾಡ್ತೀನಿ”

ಹುಡುಗ ಶ್ಯಾಣೆ, ಅಪ್ಪನ ಒಂದೇ ಮಾತಿಗಿ ....ಎಲ್ಲಾ...ತಿಳ್ಕೊಂಡ..ಅರ್ಥ ಮಾಡ್ಕೊಂಡ.

ಹುಡುಗ ತಾಬಡ-ತೋಬಡ ಮ್ಯಾನೇಜರಗಿ ಫೋನ ಮಾಡಿದ,

“ನಿಂದು ಎಂಗೆಜಮೆಂಟ್ ನಿಂಗೆ ಗೊತ್ತಿರಲ್ಲಿಲ್ಲಾ ಅಂದ್ರ ..ನಾ ನಂಬಗಿಲ್ಲಾ...ಲಿವ್ ಪ್ಲ್ಯಾನ್ ಮೊದ್ಲೇ ಮಾಡ್ಕೊಬೇಕಿತ್ತು...” ಅಂತಾ ಮ್ಯಾನೇಜರ್ ಕೂಗಾಡಿದ.....

ಈಗ ನಮ್ಮ ಹುಡುಗ, ಊರ ಹೊರಗ ಒಂದು ಅಪಾರ್ಟ್ಮೆಂಟ್ ತೊಗೊಂಡಾನ. ಇನ್ನೊಂದ ಎರಡು ತಿಂಗಳಿಗೆ ಅಪ್ಪ ಆಗವನಿದ್ದಾನ. ಆದ್ರ ಎಂಗೆಜಮೆಂಟ್ ಆಗೋದು ಗೊತ್ತಿರಲ್ಲಿಲ್ಲ ಅಂತ “ಸುಳ್ಳ” ಹೇಳಿದ್ದಕ್ಕ ಅವನ ಮ್ಯಾನೇಜರನ ಸಿಟ್ಟ ಮಾತ್ರ ಇನ್ನಾ ಕಮ್ಮಿ ಆಗಿಲ್ಲಂತ.

ಶುಕ್ರವಾರ, ಜನವರಿ 29, 2010

ಪತ್ತೇದಾರ ಅರಿಂಜಯ ಬೇಕಾಗಿದ್ದಾನೆ

ಇವತ್ತ ಇದು ಯಾಕ ನೆನಪು ಅಯಿತು ಅಂದ್ರ, ಖ್ಯಾತ ಕನ್ನಡ ದಿನಪತ್ರಿಕೆಯವರು ಇವತ್ತಿನ ಪುರವಣಿಯಲ್ಲಿ ಶಿವರಾಜಕುಮಾರ ಬಗ್ಗೆ ಬರದಾಗ ’ಗಾಜು100 ಗಂಡು (ಗಾಜುನೂರು ಅಂತ ನಾವು ಓದ್ಕೊಬೇಕು)’ ಅಂತ ತಲೆಬರಹ ಕೊಟ್ಟು, ತಮಗ ತಲಿನೂ ಇಲ್ಲಾ ನಾಚಿಕಿನೂ ಇಲ್ಲಾ ಅಂತ ತೋರಸ್ಕೋಂಡಾರ್. ಅದು ನೂರು ಅಲ್ಲಾ 'ಹಂಡ್ರೆಡ್' ಅಂತ ಅವರಿಗಿ ಅವರ ಮಾಸ್ತರೇ ಖುದ್ದಾಗಿ ಬಂದು ಹೇಳಬೇಕು. ಪತ್ರಿಕೆಯವರೇ ಹೀಂಗ ತಮ್ಮ ಕ್ರಿಯಾಶೀಲತೆಯ ಬರಡುತನ ತೊರಿಸಿಕೊಳ್ಳಬೇಕ್ಂದ್ರ ನಮ್ಮ್ಂತಾ ಓದುಗು ಮಂದಿ ಇನ್ನೇನ್ ಮಾಡಬೇಕು ಹೇಳ್ರಿ.

ಮ್ಯಾಲ್ ಹೇಳಿದ್ದು ಬರೇ ಪೀಠಿಕಾ.

ನಾವು ಕನ್ನಡಿಗರು, ನಮಗೇ ಗೊತ್ತಿರಲಾರದಂಗ ಕನ್ನಡದ್ದು ಅಂಕಿ-ಸಂಖ್ಯಾ ಮರೀಲಿಕತ್ತಿವೀ ಅಂತ ದಿನಾ ಕನ್ನಡ ಪೇಪರ್ ಓದವರಿಗೂ ತಿಳಿದಿರಲ್ಲಿಕಿಲ್ಲ. ಅಲ್ಲಾ ನೀವು ಮಜಾ ನೋಡ್ರಿ, ನಿಮ್ಮ ಗೆಳೆಯಂದ್ರಿಗೊ ಇಲ್ಲಾ ಪರಿಚಯದವರಿಗೊ ಅವರ್ ಫೋನ್ ನಂಬರ (ಅಂಕಿ ಅಲ್ಲಾ, ಮತ್ತ) ಕೇಳ್ರಿ, ಅವರು ಸುರು ಮಾಡುದೇ..ನೈನ್ ಫ಼ೈವ್ ಸಿಕ್ಸ್ ಇಲ್ಲಾ ಸೆವೆನ್ ಡಬಲ್ ತ್ರೀ ಟೂ ಅನ್ಕೊತ್ ಎಲ್ಲಾ ಇಂಗ್ಲೀಷನ ಅಂಕಿಯೊಳಗೆ ಹೇಳತಾರ್. ಇದು ಬರೇ ಮೊಬೈಲ ನಂಬರದು ಮಾತ್ರ ಅಲ್ಲಾ ಎಲ್ಲಾ ಕಡೆನೂ ಇದೆ ಕಥಿ. ಬೇಕಾದ್ರ್ ಇನ್ನೊಂದು ’ಪ್ರಯೋಗ’ ಮಾಡ್ರಿ, ಯಾರಗಾದ್ರು ತಾರೀಖ ಕೇಳ್ರಿ ಪ್ರತಿಶತ ೮೦ ಮಂದಿ ಇಂಗ್ಲೀಷನ ಅಂಕಿನೇ ಹೇಳ್ತಾರ. ಬೆಂಗಳೂರನಾಗ ಬಜ಼ಾರಕ್ ಹೋದ್ರ್ ಕಾಯಿಪಲ್ಯ್ ಮಾರಕ್ಕಿನ್ನೂ, ಎಲ್ಲಾ ಲೆಕ್ಕಾ ಹಾಕಿ ’ಸೆವೆನ್ ರೂಪಿಸ್’ ಅಂತಾಳ. ಅಂಗಡಿಯಾಂವ ನಿಮಗ ’ಟ್ವೆಂಟಿ ಫ಼ೈವ್’ ಪೈಸಾ ಕೇಳ್ತಾನೆ ಹೊರತು ನಾಲ್ಕಾಣೆನೊ ಇಲ್ಲಾ ಇಪ್ಪತ್ತೈದು ಪೈಸಾನೊ ದೇವರಾಣೆ ಕೇಳೊದಿಲ್ಲ.


ನಿಧಾನಕ್ಕ ನಮ್ಮ್ ಬಸ್‍ನಾಗಿಂದ, ಅಂಗಡಿಯೊಳಗಿಂದ, ಇಲ್ಲಾ ಪುಸ್ತಕದೊಳಗಿಂದ ಕನ್ನಡದ್ದು ಅಂಕಿಗಳು ಮಾಯಾ ಆಗ್ಲಿಕತ್ತಾವ. ಎಲ್ಲಾದಗಿಂತಾ ಹೆಚ್ಚಾಗಿ ನಮ್ಮ ಕನ್ನಡ ದಿನಪತ್ರಿಕೆಯವರು, ವಾರಪತ್ರಿಕೆಯವರು ಸಹಿತ್ ಕನ್ನಡದ ಅಂಕಿ ಬಳಸುದು ಬಿಟ್ಟಾರ್. ಎಲ್ಲಾ ಪುಟಕ್ಕುನ್ನು ಇಂಗ್ಲಿಷ್ ಅಂಕಿನೇ ಪ್ರಿಂಟ್ ಮಾಡ್ತಾರ್. ಇದು ಒಂದೇ ಪೇಪರದ್ದು ಅಲ್ಲಾ, ಎಲ್ಲಾ ಪೇಪರದ್ದು ಇದೇ ಕಥಿ. ಯಾಕ್ ಕನ್ನಡದ್ದು ಅಂಕಿ ಕಳದ ಹೊಗ್ಯಾವ್ ಇಲ್ಲಾ ತುಟ್ಟಿ ಆಗ್ಯವಾ ಇಲ್ಲಾ ಅವನ್ನ್ ಬಳಸಲ್ಲಿಕ್ಕಿ ನಮಗ್ ಎಲ್ಲಾರಿಗೂನು ನಾಚಿಕಿನಾ?


ನಾವು ನಮ್ಮ ಮಕ್ಕಳಿಗಿ ಇವತ್ತ ಮಗ್ಗಿ ಹೇಳಿಕೊಡುದು ಬಿಟ್ಟು, ’ಟೇಬಲ್ಸ್’ ಹೇಳಿಕೊಡತಿವಿ. ಅವ್ರಿಗಿ ಇಂಗ್ಲಿಷನಾಗ ಲೆಕ್ಕ ಹಾಕುದು ಕೈ ಹಿಡಿದು ಹೇಳಿಕೊಡತಿವಿ. ನಮ್ಮ ಪಿನ್ ಕೊಡ್‍ದಿಂದ್ ಹಿಡಿದು ಗಾಡಿ ನಂಬರತನಾ ಎಲ್ಲಾ ಇಂಗ್ಲೀಷನಾಗೇ ಅವ. ಹೀಂಗಾದ್ರ್ ನಾಳೆ ನಮಗ ನಮ್ಮ ಅಂಕಿ-ಸಂಖ್ಯಾಗಳು, ನಮ್ಮ ಎದುರಿಗೇನೇ ಬಂದ್ರುನು, ನಾವು ಗುರುತು ಹಿಡಿತಿವೋ ಇಲ್ಲೋ?


ಕಳಕೊಂಡಿರೊ ಇಲ್ಲಾ ಬೆಂಗಳೂರಿನಂತಾ ಊರಾಗ ಕಳದು ಹೋಗಿರೋ, ನಮ್ಮ್ ಕನ್ನಡದ ಅಂಕಿ-ಸಂಖ್ಯಾ ಹುಡಿಕಿಕೊಡ್ಲಿಕ್ಕಿ ನಮ್ಗ್ ಈಗ ಅರ್ಜೆಂಟಾಗಿ ಒಬ್ಬ ಪತ್ತೇದಾರ ಅರಿಂಜಯ ಬೇಕಾಗ್ಯಾನ್. ನಿಮಗ್ ಏನ್‍ರೆ ಅರಿಂಜಯ ಸಿಕ್ಕರೆ ದಯವಿಟ್ಟು ಈ ಕೇಸಿನ ಬಗ್ಗೆ ಮಾತಾಡತಿರಾ?

ಸೋಮವಾರ, ಡಿಸೆಂಬರ್ 8, 2008

ಇದು ಮೊದಲಾ ಸಲಾ

ಕೆಲಸ ಇಲ್ಲರ್ದ ಬಡಿಗ್ಯ ಏನ ಮಾಡಿದ ಅಂದ್ರ .... ಅಂತ ಕೇಳಬ್ಯಾಡ್ರಿ. ನಾನು ಈ ಬ್ಲಾಗ್ ಕ್ರೀಯೇಟ್ ಮಾಡಿನಿ.
ಮುಂದಾ ....ಗೊತ್ತಿಲ್ಲ ....ಟೈಮ್ ಸಿಕ್ಕರ ಚಹಾದ ಜೋಡಿ ಚೂಡಾ ತಿನ್ಲ್ಲಿಕಿ ಭೆಟ್ಟಿ ಆಗೋಣು ಅಂತ.