ಚೂಡಾ ಮಾಡು ಸಂಗಪ್ಪನೂ, ಪಿಜ್ಜಾ ಹುಡುಕೊಂಡ ಹೋದ ಆಮೇರಿಕನ್ನೂ..
ಗುರುರಾಜ ಕುಲಕರ್ಣಿ (ನಾಡಗೌಡ)
ಊರು ಅಂದ ಮ್ಯಾಲ ಹೋಟೆಲಗಳು ಇರಬೇಕಲ್ಲ. ಹೂಂ, ಅವು ಇದ್ದವು. ಬಜ಼ಾರಾನಾಗ ಉಡುಪಿಯವರದು ಎರಡು ಹೋಟೆಲ ಇದ್ದವು.ಬಜ಼ಾರದ್ದು ಒಂದೊಂದು ತುದಿಗಿ ಒಂದೊಂದು ಇದ್ದವು.ಬಜ಼ಾರಕ ಅಡ್ಡ ಇರು ರಸ್ತಾದೊಳಗ ಕುಲ್ಕರ್ಣಿ ಬಿಂದುಂದು ಒಂದು ಚಹಾದು ಅಂಗಡಿ ಇರತ್ತಿತ್ತು. ಅದು ಬಿಂದುನ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಆಗಾಗ ಅಂಗಡಿ ಶುರು ಆಗುದು ಇಲ್ಲಾ ಬಂದ್ ಆಗುದು. ಬಸ-ಸ್ಟ್ಯಾಂಡ್ ಸುತ್ತಮುತ್ತಲು ಒಂದು ನಾಲ್ಕಾರು ಚಾ ಅಂಗಡಿ ಇದ್ದವು. ಸಂಗಮದವರ ಚಾ ಅಂಗಡಿಯೊಳಗ ನಮ್ಮೂರ ಮಂದಿ ಕೂತು ಚಾ ಕುಡುಕೊತ್, ಬೀಡಿ ಅಡಿಕಿ ಜೋಡಿ ಹರಟಿ ಹೊಡಕೊತ ಕೂತಿರ್ದಿದ್ದರು. ಮಸೀದಿ ಮುಂದಿನ ರಸ್ತಾದಾಗ, "ಉಮ ಹೋಟೇಲ" ಅಂತ ಕನ್ನಡ-ಇಂಗ್ಲೀಷನಾಗ ಬರ್ದಿರೊ ಬೋರ್ಡ ಇರುವಂತಾ ಉಡುಪಿಯವರದು ಇನ್ನೊಂದು ಚಾ ಅಂಗಡಿ ಇತ್ತು. ಎಲ್ಲಾ ಚಾ ಅಂಗಡಿಯೊಳಗ ಸಿಗತಿದ್ದದ್ದು, ಮುಂಜಾನೆ ಅವಲಕ್ಕಿ ಸುಸಲ, ಉಪ್ಪಿಟ,ಪುರಿ-ಪಿಟ್ಲ, ಭಜ್ಜಿ ಸಂಜಿ ಆದ್ರ ಚುರುಮುರಿ ಚೂಡ. ಇಡ್ಲಿ-ವಡಾ ಇಲ್ಲಾ ದೋಸಾದಂತಾ ಸ್ಪೇಶಲ್ ತಿನಿಸು ಬೇಕು ಅಂದ್ರ ಉಡುಪಿ ಜಯಂತನವರ ಹೋಟೇಲಗೆ ಹೋಗಬೇಕಿತ್ತು.ಆದ್ರ ಪೂರಿ-ಭಾಜಿಯೊಳಗ ಇಲ್ಲಾ ಚೂಡಾದೊಳಗೇ ಸ್ಪೇಶಲ್ ಬೇಕು ಅಂದ್ರ ಬಜ಼ಾರ ನಡುವ, ಪೊಸ್ಟ ಆಫೀಸ್ ಹತ್ತರ, ಹೆಣ್ಣ ಮಕ್ಕಳ ಸಾಲಿ ಮುಂದ ಇರು ಬಮ್ಮಣ್ಣಿಯವರ ಹೋಟೇಲಗಿ ಹೋಗಬೇಕಿತ್ತು.
ನಾನು ಎಂಟನೇತ್ತಕ್ಕ ಬಂದಾಗ, ಬಜ಼ಾರ ಹತ್ತರ ಇರು ಎಂಟು ಮನಿ ಇರು ವಠಾರದಂತಹ “ರಮಾ ನಿವಾಸ”ದೊಳಗ, ಒಂದ ಮನಿಗಿ ಬಾಡಿಗಿಗಿ ಬಂದ್ವಿ. ಅರ್ಜೆಂಟಗಿ ಇಲ್ಲಾ ಗಡಿಬಿಡಿ ಆದಾಗ ಮುಂಜಾನೆ ಹೋಟೆಲಗಿ ಹೋಗಿ ನಮಗೆಲ್ಲಾರಗೂ ಪೂರಿ-ಭಾಜಿ ಮುಂಜಾನೆ ಟಿಫಿನಗಿ ಕಟ್ಟಸಕೊಂಡು ಬರುವಂತಾ ಪರ್ಮಿಷನ ದಾದಾ ಕೊಟ್ಟಿದ್ದರು. ಸಾಮಾನ್ಯವಾಗಿ ಈ ಕೆಲಸ ನಮ್ಮ ಅಣ್ಣ ಮಾಡತಿದ್ದ, ನಡು ನಡುವ ನನಗೂ ಒಂದರೆಡು ಅವಕಾಶ ಸಿಗುತ್ತಿದ್ದವು. ಒಂದು ಕೈ ಚೀಲ ಅದರೊಳಗ ಪೀಟ್ಲಾಕ್ಕ ಒಂದು ಸಣ್ಣ ಡಬ್ಬಿ ತಗೊಂಡು, ಕಿಸೆಯೊಳಗ ದಾದಾ ಕೊಟ್ಟಿದ್ದು ರೊಕ್ಕ ಇಟ್ಕೊಂಡು ಹೋಗಿ, ಬಮ್ಮಣ್ಣಿಯವರ ಅಂಗಡಿ ಹೋದರ ಅಲ್ಲಿ ಕೂತವರು "ಯಾಕೊ ನೀ ಚಾ ಅಂಗಡಿಗಿ ಬಂದೀ?" ಅಂತ ನನಗ ಕೇಳು ಟೊಪ್ಪಿಗಿ-ಧೋತರ ಮಂದಿಗಿ, ಅಂಗಡಿ ಗಲ್ಲಾದಾಗ ಕೂತಿರೊ ಬಮ್ಮಣ್ಣಿ ಮಾಲಕ, "ಡಾಕ್ಟರೇ ಕಳಿಸಿರ್ತಾರ ನಾಷ್ಟಾ ತೊಂಗೊಂಡು ಬರ್ಲಿಕ್ಕಿ" ಅಂತ ಅಲ್ಲಿ ಕೂತವರಿಗಿ ಹೇಳವರು.
ಇಲ್ಲಿ ಒಂದು ವಿಷಯಾ ಭಾಳ ಸ್ಪಷ್ಟ ಹೇಳಬೇಕು ನಿಮಗ, ನಮ್ಮಂತಾ ಸಣ್ಣ ಸಣ್ಣ ಹುಡುಗರು ‘ಚಾ’ದ ಅಂಗಡಿ ಹೋಗುದು ಆವಾಗಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿತ್ತು. ಹಿರಿಯ ವಯಸ್ಸಿನ ಯಾರಿಗೆ ಆಗಲಿ ಇಂತಾಹ ಯಾವುದೇ ಅಪರಾಧಿಗಳಿಗೆ ಸ್ಥಳದಲ್ಲಿಯೇ ಶಿಕ್ಷೆ ವಿಧಿಸುವ ಅಧಿಕಾರವಿರುತ್ತಿತ್ತು. ಇಂತಾ ಅಪರಾಧ ಮಾಡುವ ಧೈರ್ಯ ಇದ್ದ ನನ್ನ ದೊಸ್ತರು ತಮ್ಮ ಪಾಲಿನ ಶಿಕ್ಷಾ, ಹೋಟೆಲನಿಂದ ಮನೆ ಮುಟ್ಟೂವರೆಗೂ ಅನುಭವಿಸಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಇಂತಾ ರಾಮ ರಾಜ್ಯದೊಳಗ ನನ್ನಂತೊನು ಬಜ಼ಾರನೊಳಗ ಇರುವಂತಾ, ಚಾ ಅಂಗಡಿಯೊಳಗ ಹೊಕ್ಕಿ ನಾಷ್ಟಾ ಮಾಡುದು ದುಸ್ಸಾಹಸದ ಮಾತಾಗಿತ್ತು.
ನಾನು ೯ ಇಲ್ಲಾ ೧೦ನೇತ್ತೆ ಬಂದಾಗ, ಖಾಸಾ ಖಾಸಾ ದೋಸ್ತ ಸಂಗಯ್ಯನ ಜೋಡಿ ಬಮ್ಮಣ್ಣಿವರ ‘ಚಾ’ದ ಅಂಗಡಿವೋಳಗ ಕಳ್ಳ ಬೆಕ್ಕಿನ ಹೆಜ್ಜಿ ಇಟ್ಟೆ. ಅಲ್ಲಿ ಖಾರಾ-ಬೆಳ್ಳುಳ್ಳಿದು ಚುರುಮುರಿ ಚೂಡಾ ರುಚಿ ನೋಡಿದೆ. ಕೆಂಪು ಹಳದಿ ಮಿಶ್ರಿತ ಚುರುಮುರಿ, ನಡುವ ನಡುವ ಹಣಿಕಿ ಹಾಕೊ ಕೆಂಪನ ಶೇಂಗಾ, ಮ್ಯಾಲ ದಪ್ಪ ದಾರದಂಗ ಸೇವು. ಮುಷ್ಟಿಯೊಳಗ ಸ್ವಲ್ಪ ತೊಗೊಂಡು, ಬಾಯಿಗಿ ಹಾಕೊಂಡ್ರೆ ಆ ...ಆಹಾಃ...ಏನು ರುಚಿ ಇರ್ತಿತ್ತು ಅಂತೀರಿ. ಇವತ್ತಿಗೂ ನನ್ನ ಪ್ರಕಾರ ಅಮೃತ ಅಂತಾ ಏನಾದ್ರು ಇದ್ದರ ಅದರ ರುಚಿನೂ ಆ ಚೂಡಾದ ರುಚಿನೇ ಇರ್ತದ. ಯಾವಾಗ, ಯಾವಾಗ .. ನಮ್ಮಿಬ್ಬರ ಹತ್ತಿರ ೭೦ ಪೈಸಾ ಒಟ್ಟ ಆಗತಿದ್ದೋ ಅವಾಗ, ಆವಾಗ... ಬಮ್ಮಣ್ಣಿವರ ಚಾ’ದ ಅಂಗಡಿಗೆ ನಮ್ಮ ಪ್ರವೇಶ ಆಗತ್ತಿತ್ತು. ಬೋನಸ್ ಏನರೆ ಸಿಕ್ಕಿದ್ದರ ಚೂಡಾದ ಮ್ಯಾಲ ಸ್ಪೆಷಲ್ ಚಾ ಆಗ್ತಿತ್ತು. ನಮ್ಮಿಬ್ಬರಿಗೂ ಒಳಗಿನ ಖೋಲಿಯೊಳಗ ಕೂಡಿಸಿ (ಯಾಕಂದ್ರ ಯಾರಿಗೂ ಕಾಣಿಸಬಾರ್ದಲ್ಲ), ಎಕ್ಸಟ್ರಾ ಶೇಂಗಾ, ಸೇವು, ಮ್ಯಾಲ ಸಣ್ಣಗ ಹೆಚ್ಚಿದ ಉಳ್ಳಾಗಡ್ಡಿ ಹಾಕಿ ಕೊಡ್ತಿದ್ದರು. ಈ ಚಹಾ ಚೂಡದ ಕಾರ್ಯಕ್ರಮ ಸುಮಾರು ಎರಡು ಮೂರು ವರ್ಷ ನಡೀತು.
ಮುಂದ ನಾನು ಓದಲಿಕ್ಕಿಂತ ಧಾರವಾಡಕ ಬಂದೆ. ಸಿಂದಗಿಗೆ ಸೂಟಿಗಿ ಹೋದಾಗ ಚೂಡಾದ ರುಚಿ ಆವಾಗಾವಾಗ ಸಿಗ್ತಿತ್ತು. ವರ್ಷ ಕಳೆದಂಗ ಕ್ರಮೇಣ ಅದು ಕಡಿಮಿ ಆಯಿತು. ಆದ್ರೂ ನಾನು, ಸಂಗಯ್ಯ ಚೂಡಾ ತಿನ್ನು ಪ್ರೋಗ್ರಾಮ್ ನೆನಸಕೊಳೋದು ತಪ್ಪಲ್ಲಿಲ್ಲ.
ಮತ್ತಿಷ್ಟು ವರ್ಷಗಳು ಕಳದು ಹೋದವು.ನಾವು ಬಸ್ ಸ್ಟಾಂಡ್ ಹತ್ತಿರ, ಕೋರ್ಟ್ ಹಿಂದಿನ ರೋಡನಾಗ ಇರೋ ನಮ್ಮ ಹೊಸಾ ಮನಿಗಿ ಬಂದೆವು. ನಾನು ಬದುಕು ಹುಡುಕೊಂಡು ಬೆಂಗಳೂರಿಗೆ ಬಂದೆ..... ನೌಕರಿ,ಮದುವಿ, ಮಕ್ಕಳು ಸಂಸಾರ ಅನ್ನಕೊತ, ಬದುಕು ಬೆಳಕೊತ-ಬದಲಾಕೊತ ಹೋಯಿತು. ಈ ಕಡೆ ಊರಾಗಿನ ಬಮ್ಮಣ್ಣಿವರ ಅಂಗಡಿ ಬದಲಾಯಿತು, ಬಜಾರ ಬದಲಾಯಿತು, ಮಂದಿ ಬದಲಾದರು. ಹೋಟೆಲನಾಗ ಕೊಡು ನಾಷ್ಟನೂ ಬದಲಾಯಿತು. ಇಡ್ಲಿ, ದೋಸಾ, ಗೋಬಿ ಮಂಚೂರಿ, ಅದು ಎಂತಾದೋ ಫ್ರೈಡ್ ರೈಸ್ ಅಂತ ಎಲ್ಲಾ ಬಂದವು.
ಸರಿ ಸುಮಾರು ೨೦-೨೫ ವರ್ಷದ ಮ್ಯಾಲ ಪ್ರತಿ ವರ್ಷದಂಗ ನಾನು ದೀಪವಾಳಿಗಿ ಊರಿಗಿ ಹೋದಾಗ, ಒಂದ ಸರ್ತಿ ಲಕ್ಷ್ಮೀ ಪೂಜಾ ಮುಗದ ಮ್ಯಾಲ ನನ್ನ ಮಗ ಶೌರಿನ ಕರ್ಕೊಂಡು ಊರೊಳಿಗಿನ ಬಜಾರದಾಗಿನ ಅಂಗಡಿಗೋಳನ್ನ ತೋರಿಸಿಲ್ಲಿಕ್ಕಿ ಕರ್ಕೊಂಡು ಹೋದೆ. ಮಗನಿಗೆ ನನ್ನ ಬಾಲ್ಯ ತೋರಿಸೋ ಹಂಬಲದಿಂದ ನಾನು ಆಟ ಆಡಿದ ಜಾಗ, ಗೆಳೆಯಂದ್ರ ಮನೆಗೊಳು, ದೀಪಾವಳಿಗೆ ಬಣ್ಣ ಹಚ್ಚಿದ ಅಂಗಡಿಗೋಳು, ಪ್ರತಿ ಅಂಗಡಿ ಮುಂದ ಕಟ್ಟಿದ ಚೆಂಡು ಹೂವ, ತೆಂಗಿನ ಗರಿ, ಸಣ್ಣ ಸಣ್ಣ ಹುಡುಗುರು ಹೊಸ ಬಟ್ಟಿ ಮ್ಯಾಲ ಬಿಳಿ ಟೋಪಿಗೆ ಹಾಕೊಂಡು ಪಟಾಕಿ ಹೊಡಿಯೋದು, ಅವನಿಗೆ ತೋರೋಸ್ಕೊತ ನಮ್ಮ ಬಮ್ಮಣ್ಣಿವರ ಅಂಗಡಿ ಕಡೆ ಬಂದೆ. ಅಲ್ಲಿ ಅಂಗಡಿ ಮುಂದ ನಿಂತು, ಚೂಡಾದ ಬಗ್ಗೆ.... ನಾನು ಗೆಳೆಯನ ಜೊತೆ ಬಂದು ಕದ್ದು ಚೂಡಾ ತಿನ್ನ್ನೋದರ ಬಗ್ಗೆ ಹೇಳಿದೆ. ಅವನು ಎಷ್ಟರ ಮಟ್ಟಿಗೆ ಕೇಳಸ್ಕೊಂಡನೋ ಏನೋ ಅಂತ ಗೊತ್ತ ಸಹಿತ ಮಾಡ್ಕೊಳದೆ.. ನನ್ನ ಮಾತು ನಾನು ಹೇಳೇ ಹೇಳಿದೆ. ನನ್ನ ಮಾತಿನ ರಭಸ ಕಮ್ಮಿ ಆಗಿ ಸ್ವಲ್ಪ ಹೊತ್ತ ಆದ ಮೇಲೆ ಶೌರಿ “ ನೀ ಈಗ ಚೂಡಾ ತಿಂತಿಯಾ?” ಅಂದ. “ಇಷ್ಟು ರಾತ್ರಿ ಆದ ಮೇಲೆ ಹೋಟೆಲಗಿ ಹೋಗಿದ್ದು ಗೊತ್ತಾದರ ಅಮ್ಮಮ್ಮ ಬೈತಾಳೆ..” ಅಂತ ಬೇರೆ ಸೇರಸ್ದ.
ಚೂಡಾದ ಸಲುವಾಗಿ ಕಳ್ಳ ಬೆಕ್ಕ ಆಗಿರಿತ್ತದ್ದ ನನಗೆ, ಈಗಲೂ ಒಂದು ಕೈ ನೋಡೆ ಬಿಡೋಣ ಅಂತ ಅಂಗಡಿಯೋಳಗ ಅವನ ಕೈ ಹಿಡಕೊಂಡು ಹೊಕ್ಕೆ.
ಅಂಗಡಿ ಹುಡುಗುರು ಹೊಸಾ ಬಟ್ಟಿ ಹಾಕೊಂಡು ಲಕ್ಷ್ಮೀ ಪೂಜಾ ತಯಾರಿ ನಡಿಸಿದ್ರು. ನಾ ಅಂದುಕೊಂಡಗ ಅಂಗಡಿ ಗಲ್ಲಾದ ಮ್ಯಾಲ ಕೂತ ಹೊಸಾ ಸಣ್ಣ ಮಾಲೀಕ ನನಗ ಗುರುತ ಹಿಡಿಲ್ಲಿಲ್ಲ. ಆದ್ರೂ ದೇಶವಾರಿ ನಗು ನಕ್ಕು “ಏನ್ ಬೇಕ್ರಿ?” ಅಂತ ಅಂದ. ನಾನು “ಎರೆಡು ಚೂಡಾ ಪಾರ್ಸೆಲ್ ಮಾಡ್ರಿ” ಅಂದೆ. “ಸರ್ ಇವತ್ತ ಲಕ್ಷ್ಮೀ ಪೂಜಾ,ರೀ... ಹಿಂಗಾಗಿ ನಾಷ್ಟಾ ಏನೂ ಇಲ್ಲರಿ...” ಅಂದ. ಅದಕ್ಕ ನಾನು ಅವನಿಗೆ ನನ್ನ ಚೂಡಾದ ದಿನಗೋಳ ಬಗ್ಗೆ ಮಾತ ಹೇಳಿ, ಇರ್ಲಿ ಬಿಡ್ರಿ ಮತ್ತೊಂದು ಸರ್ತಿ ಬರ್ತಿನ್ರಿ ಅಂದೆ. ಅವನಿಗೆ ಏನು ಅನ್ಸತ್ತೋ ಏನೋ, ನನ್ನ ಮಗ್ಗಲಿಗ ನಿಂತ ಶೌರಿನೊಮ್ಮೆ ಮತ್ತ ನನ್ನೊಮ್ಮೆ ನೋಡಿ “ಪಾರ್ಸೆಲ್ ಮಾಡ್ಸಿತಿನಿ ನಿಂದಿರ್ರೀ” ಅಂದ. ಒಳಗ ಎತ್ತಿ ಇಟ್ಟಿದ್ದ ಬುಟ್ಟಿಯೊಳಗಿನ ಚೂಡಾ ತೆಗೆಸಿ ಪಾರ್ಸೆಲ್ ಮಾಡಿ ಕೊಟ್ಟು “ಆ ಟೈಮನಾಗ ಸಂಗಪ್ಪ ಅನ್ನೋವ ಚೂಡಾ ಮಾಡ್ತಿದ್ದರಿ...ಅವ ಸತ್ತು ೧೦-೧೫ ವರ್ಷ ಆಯಿತರಿ...ಆಮೇಲೆ ಅವನಂಗ ಚೂಡಾ ಮಾಡೋರೆ ಸಿಕ್ಕಿಲ್ಲರಿ ... ಇವತ್ತಿಗೂ ನಿಮ್ಮಂಗ ಮಂದಿ ಆವಾಗಿನ ಚೂಡಾ ನೆನೆಸತಾರಿ” ಅಂತ ಅಂದ.
ನಾನು ಎಂದೂ ಕಂಡಿರದ ಸಂಗಪ್ಪನ ಬಗ್ಗೆ ನನಗೆ ಗೌರವ ಭಾವನೆ ಮೂಡಿತು. ತನಗೆ ಗೊತ್ತಿರೋ ಕಸುಬುದಾರಿಕೆಯಿಂದ ಇನ್ನೂ ಮಂದಿ ನೆನಪಿನೋಳಗ ಉಳಿದ್ದಿದ್ದು ನೋಡಿ ಅವನ ಬದುಕು ಸಾರ್ಥ್ಯಕ್ಯ ಆಯಿತು ಅಂತ ಅನ್ನಸ್ತು.
ಕಟ್ಟಿಸಿಕೊಂಡಿರೋ ಚೂಡಾ ತೊಗೊಂಡು ಮನಿಗೆ ಬಂದೆವು. ಶೌರಿ ಮೊದ್ಲೇ ಹೇಳಿದಂಗ, ರಾತ್ರಿ ಹೋಟೆಲ ಚೂಡಾ ತಂದ್ದಿದದ್ದಕ್ಕ ನಮ್ಮಮ್ಮನ ಹತ್ರ ಬೈಸಿಕೊಂಡಿದ್ದು ಆಯಿತು.
ಶೌರಿ, ಪಲ್ಲವಿ ಚೂಡಾ ತಿಂದರು, "ಮಸ್ತ ಅವ" ಅಂದ್ರು. ನಾನೂ ತಿಂದೆ, ಮಜಾ ಬರ್ಲಿಲ್ಲ..ಆದ್ರ ಅವರಿಗೆ ಹೇಳಿಲ್ಲ..
-------------------------------------------------------------
ಉಪ ಸಂಹಾರ
ಸಿಂದಗಿಯಿಂದ ವಾಪಸ್ಸು ಬಂದು ತಿಂಗಳಾದ ಮೇಲೆ ಮನ್ಯಾಗ ಒಂದು ರವಿವಾರ ಮಧ್ಯಾನ್ಹ, ನಾನು ಶೌರಿ ಟಿ ವಿ ಯೊಳಗ ಡಿಸ್ಕವರಿ ಚಾನೆಲ್ ನೋಡಕೊತ ಕೂತಿದ್ದಿವಿ. ಇಟಲಿ ಮೂಲದ ಆಮೆರಿಕನ್ ಒಬ್ಬನ ಬಗ್ಗೆ ಡಾಕ್ಯುಮೆಂಟರಿ ಅದು. ತೀರಿ ಹೋಗಿರೋ ತನ್ನ ಅಜ್ಜಿನೋ ಇಲ್ಲಾ ಮುತ್ತಜ್ಜಿನೋ ಬರಿದಿಟ್ಟಿರೋ ಡೈರಿ ಪ್ರಕಾರ ಅವಳ ಹುಟ್ಟಿದೂರಿನಲ್ಲಿನ ಹೋಟೆಲ್ ಒಂದರ ಪಿಜ್ಜಾದ ರುಚಿ ಹುಡಕೊಂಡು, ಅವನು ಹೋಗಿರ್ತಾನೆ.
ಅವನು ಹೋಟೆಲ್ ಹುಡ್ಕೊಂಡು ಹೋಗೋ ದಾರಿ ಬಗ್ಗೆ, ಆ ಹೋಟೆಲ್ ಸಿಕ್ಕ ಮೇಲೆ, ಈಗ ಅದೇ ರೀತಿ ಪಿಜ್ಜಾ ಮಾಡೋರ ಬಗ್ಗೆ, ಆ ಮನೆಯವರೆಲ್ಲಾ ಪಿತ್ರಾರ್ಜಿತ ಆಸ್ತಿಯಾಗಿ ಬಂದ ಆ ರೆಸಿಪಿ ಬಗೆಗಿನ ವ್ಯಕ್ತ ಪಡಿಸೋ ಹೆಮ್ಮೆ ಬಗ್ಗೆ, ಎಲ್ಲಾ ಸಣ್ಣ ಸಣ್ಣ ವಿಷಯಗಳನ್ನು ವಿವರವಾಗಿ, ಎಲ್ಲವನ್ನು ಅದ್ಭುತವಾಗಿ ತೋರಿಸಿದರು.
ಪ್ರೋಗ್ರಾಮ್ ಮುಗಿದ ಮ್ಯಾಲ ಶೌರಿ “ನಾವೂ ಅಲ್ಲಿ ಹೋಗೋಣಾ ಅಪ್ಪಾ? ಅಲ್ಲಿ ಪಿಜ್ಜಾ ಮಸ್ತ ಇರತದ” ಅಂದ. ನಾನು ಹೂಂ ಹೋಗೋಣ ಅಂದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ