ಎಪ್ರಿಲ್ ೪
ಬೆಂಗಳೂರು
ನಮ್ಮ ದಾದಾ (ತಂದೆ), ರೇಡಿಯೋದಲ್ಲಿ ಬರುವ ಹಿಂದುಸ್ತಾನಿ ಗಾಯನಕ್ಕೆ ತಲೆದೂಗುತ್ತಾ ನಮ್ಮನ್ನೂ(ಅಕ್ಕ,ಅಣ್ಣ) ಅಲೆಯಾಗಿ ಬರುತ್ತಿರುವ ಧ್ವನಿಯನ್ನು ಕೇಳಲೂ ಹೇಳುತ್ತಿದ್ದಾಗ, ಒಲ್ಲದ ಮನಸಿಂದಲೇ ರೇಡಿಯೋ ಮುಂದೆ ಕೂಡುತ್ತಿದ್ದೆವು.
ಆದರೆ ನಮ್ಮ ಕಣ್ಣು ಗಡಿಯಾರದ ಕಡೆ ಆಗಾಗ ನೋಡುತ್ತಿತ್ತು. ತಂದೆಯವರ ರೇಡಿಯೋ ಕೇಳುವ ಸಮಯ ಮುಗಿದ ತಕ್ಷಣ, ನಾವು ಮುಂದಿನ ಕಾರ್ಯಕ್ರಮವಾಗಿರುತ್ತಿದ್ದ “ನಿಮ್ಮ ಮೆಚ್ಚಿನ ಕನ್ನಡ ಚಿತ್ರಗೀತೆಗಳು” ಕೇಳಲು ಉತ್ಸುಕರಾಗಿರುತ್ತಿದ್ದೆವು.
ರೇಡಿಯೋದಲ್ಲಿ ಚಿತ್ರಗೀತೆಗಳ ಮೊದಲು ಬರುತ್ತಿದ್ದ ಹಿಂದುಸ್ತಾನಿ ಗಾಯನದ ಸಂಗೀತ ದಿಗ್ಗಜರಾದ ಶ್ರೀ ಭೀಮಸೇನ ಜೋಷಿ, ಶ್ರೀಮತಿ ಗಂಗೂಬಾಯಿ ಹಾನಗಲ್ಲ, ಶ್ರೀ ಮಲ್ಲಿಕಾರ್ಜುನ ಮನ್ಸೂರ್, ಶ್ರೀ ಕುಮಾರ ಗಂಧರ್ವ ಅವರ ಗಾಯನದ ಜೊತೆ ಆಗಾಗ ಶ್ರೀಮತಿ ಪರ್ವಿನ್ ಸುಲ್ತಾನ್, ಶ್ರೀಮತಿ ಪ್ರಭಾ ಅತ್ರೆ ಮತ್ತು ಶ್ರೀಮತಿ ಕಿಶೋರಿ ಅಮೋಣಕರ, ಶ್ರೀಮತಿ ಎಂ ರಾಜಮ್ಮರವರ ಹೆಸರುಗಳೂ ಕೇಳಿ ಬರುತ್ತಿದ್ದವು. ಗಾಯನವನ್ನು ಕೇಳುವಾಗ ನಮ್ಮ ತಂದೆ ಅವತ್ತಿನ ರಾಗದ ಪರಿಚಯ ಮಾಡಿ ಕೊಡುತ್ತಿದ್ದರು. ಅದಕ್ಕೆ ಸಂಭಂದಿಸಿದ ಕಲಾವಿದರ ಬಗ್ಗೆ ಹೇಳುತ್ತಿದ್ದರು. ತಬಲಾದ ತಾಳದ ಬಗ್ಗೆ ನಮ್ಮ ಗಮನ ಸೆಳೆಯುತ್ತಿದ್ದರು. ಒಟ್ಟಾರೆ ನಮಗೆ ಸಂಗೀತವನ್ನು ಆಸ್ವಾದಿಸುವ ಮನಸನ್ನು ಹದಗೊಳಿಸುತ್ತಿದ್ದರು. ಆ ಸಮಯದಲ್ಲಿ ನನಗೆ ಕಿಶೋರಿ ಅಮೋಣಕರ ಅವರ ಅಭಂಗ ಇಷ್ಟವಾಗುತ್ತಿತ್ತು.
ನಿನ್ನೆ ಶ್ರೀಮತಿ ಅಮೋಣಕರ ತಮ್ಮ ಸಂಗೀತದ ಅಪಾರವಾದ ಗಾಯನ ಮುದ್ರಿಕೆಗಳನ್ನು ಕೇಳಲು ಮುಂದಿನ ಪೀಳಿಗೆಗೆ ಬಿಟ್ಟು, ಸಂಗೀತ ಸರಸತಿ ಸೇವೆಗೆ ಹೊರಟು ನಿಂತಾಗ, ಅವರಿಗೆ ೮೪ ರ ಹರಯ. ಅವರು ಹಾಡಿದ ಒಂದು ಅಭಂಗ ಇಲ್ಲಿದೆ.
ಅಂದ ಹಾಗೆ, ಅವರ ಕೇಶ ಶೈಲಿಯೂ ಚಿಕ್ಕ ವಯಸ್ಸಿನಲ್ಲಿ ನನಗೆ ಒಂದು ಕೌತಕದ ವಿಷಯವಾಗಿತ್ತು.